ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯಲ್ಲಿ ಮೊಬೈಲ್ ಕಳ್ಳವು ಹಾಗೂ ಸುಲಿಗೆ ಕೃತ್ಯದಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ಏಳು ಮಂದಿಯನ್ನು ಪ್ರತ್ಯೇಕವಾಗಿ ಉಪ್ಪಾರಪೇಟೆ ಹಾಗೂ ಚಂದ್ರಾಲೇಔಟ್ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.ಆಂಧ್ರಪ್ರದೇಶ ರಾಜ್ಯ ಕರ್ನೂಲ್ ಜಿಲ್ಲೆಯ ನಾಗನೂರಿ ಕುಮಾರ್, ಪರಶುರಾಮ್ ಅಲಿಯಾಸ್ ಅಭಿ, ಇವರ ಸಹಚರ ಕಾನೂನು ಸಂಘರ್ಷಕ್ಕೊಳಗಾದ ಬಾಲಕ, ಪೀಣ್ಯ ಸಮೀಪದ ಪಾರ್ವತಿ ನಗರದ ಮಹಮ್ಮದ್ ಫಾರೂಕ್, ಜೆ.ಜೆ.ನಗರದ ಸೈಯದ್ ಪರ್ವೀಜ್, ಸುಧಾಮನಗರದ ಕೆ.ಟಿ.ರೆಹಮಾನ್, ಪುಲಕೇಶಿನಗರದ ಸೈಯದ್ ಜಮೀರ್ ಹಾಗೂ ಮೀನಾಜ್‌ನಗರದ ಸೈಯದ್ ಹಾಷಿಮ್ ಅಲಿಯಾಸ್ ಖರ್ರುಂ ಬಂಧಿತರಾಗಿದ್ದಾರೆ. ಆರೋಪಿಗಳಿಂದ ₹28.77 ಲಕ್ಷ ಮೌಲ್ಯದ 208 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಂಧ್ರ ಗ್ಯಾಂಗ್ ಸೆರೆ; 176 ಮೊಬೈಲ್‌ಗಳು ಜಪ್ತಿ:ಮೆಜೆಸ್ಟಿಕ್‌ನ ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ತೆರಳಿ ಜನರ ಗಮನ ಬೇರೆಡೆ ಸೆಳೆದು ಮೊಬೈಲ್ ಎಗರಿಸುತ್ತಿದ್ದ ಆಂಧ್ರ ಗ್ಯಾಂಗನ್ನು ಉಪ್ಪಾರಪೇಟೆ ಪೊಲೀಸರು ಗಾಳಕ್ಕೆ ಹಾಕಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ನಾಗನೂರಿ ಕುಮಾರ್ ತಂಡ ಸೆರೆಯಾಗಿದ್ದು, ಈ ಆರೋಪಿಗಳಿಂದ ₹22.40 ಲಕ್ಷ ಮೌಲ್ಯದ 176 ಮೊಬೈಲ್‌ಗಳು ಹಾಗೂ ಒಂದು ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಕೆಲ ದಿನಗಳ ಹಿಂದೆ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಶಿವಮೊಗ್ಗದಿಂದ ನಗರಕ್ಕೆ ಬಂದಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಮೂವರು ಆರೋಪಿಗಳ ಪೈಕಿ ಕುಮಾರ್ ವೃತ್ತಿಪರ ಮೊಬೈಲ್ ಕಳ್ಳನಾಗಿದ್ದು, ಆತನ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಬಸ್ ನಿಲ್ದಾಣಗಳಲ್ಲಿ ಜನ ಸಂದಣಿ ವೇಳೆ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಆರೋಪಿಗಳು ಮೊಬೈಲ್ ಎಗರಿಸುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ನಗದು ಬಹುಮಾನ:ಮೊಬೈಲ್ ಕಳ್ಳರನ್ನು ಬಂಧಿಸಿದ ಚಂದ್ರಾಲೇಔಟ್ ಹಾಗೂ ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ನಗದು ಬಹುಮಾನವನ್ನು ಆಯುಕ್ತ ಬಿ.ದಯಾನಂದ್ ಪ್ರಕಟಿಸಿದರು.ಮೊಬೈಲ್ ಕದ್ದು ಬಿಡಿ ಭಾಗಗಳ ಮಾರಾಟಜನರಿಗೆ ಬೆದರಿಕೆ ಹಾಕಿ ಮೊಬೈಲ್ ದೋಚಿ ಬಳಿಕ ಅವುಗಳ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದ ಐವರು ಕಿಡಿಗೇಡಿಗಳು ಚಂದ್ರಾಲೇಔಟ್ ಠಾಣೆ ಪೊಲೀಸರು ಬಲೆ ಬಿದ್ದಿದ್ದಾರೆ. ಕೆಲ ದಿನಗಳ ಹಿಂದೆ ನಾಗರಬಾವಿ ಸಮೀಪದ ಸುವರ್ಣ ಲೇಔಟ್ ರಸ್ತೆಯಲ್ಲಿ ವ್ಯಕ್ತಿಯೊಬ್ಬರಿಗೆ ಬೆದರಿಸಿ ₹1 ಲಕ್ಷ ಮೌಲ್ಯದ ಮೊಬೈಲ್ ದೋಚಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಆ ಮೊಬೈಲ್‌ನಲ್ಲಿದ್ದ ಫೈಂಡ್ ಮೈ ಡಿವೈಸ್ ಆ್ಯಪ್ ಮೂಲಕ ಮೊಬೈಲ್ ಸುಲಿಗೆಕೋರರನ್ನು ಸೆರೆ ಹಿಡಿದರು. ಬಳಿಕ ಈ ಆರೋಪಿಗಳಿಂದ ₹6.31 ಲಕ್ಷ ಮೌಲ್ಯದ 32 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ತಂಡದಿಂದ ಮೂರು ಮೊಬೈಲ್ ಸುಲಿಗೆ ಕೃತ್ಯಗಳು ಪತ್ತೆಯಾಗಿವೆ.
ಇನ್ನು ಈ ಆರೋಪಿಗಳ ಪೈಕಿ ಮಹಮ್ಮದ್ ಫಾರೂಕ್, ಸೈಯದ್ ಪರ್ವೀಜ್, ಕೆ.ಟಿ.ರೆಹಮಾನ್ ಮೊಬೈಲ್ ಸುಲಿಗೆ ಮಾಡಿದರೆ, ಇನ್ನುಳಿದ ಜಮೀರ್ ಹಾಗೂ ಸೈಯದ್ ಖರ್ರುಂ ಕದ್ದ ಮೊಬೈಲ್‌ಗಳ ಬಿಡಿ ಭಾಗಗಳನ್ನು ತೆಗೆದು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.