ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಗಣರಾಜ್ಯೋತ್ಸವ ದಿನದಂದೇ ನಗರದಲ್ಲಿ ಭಯೋತ್ಪಾದಕರ ದಾಳಿ ನಡೆಸಿದ್ದರು. ಆದರೆ, ಭಾರತೀಯ ಸೇನೆಯ ವಿಶೇಷ ಪಡೆಯ 13ನೇ ಪ್ಯಾರಾ ಯೋಧರು ಕಾರ್ಯಾಚರಣೆ ನಡೆಸಿ ದಾಳಿ ನಂತರ ಅಡಗುತಾಣದಲ್ಲಿ ಕುಳಿತಿದ್ದ ಮೂವರು ಭಯೋತ್ಪಾದಕರನ್ನು ಸದೆಬಡೆದು ನಗರವನ್ನು ಸುರಕ್ಷಿತವಾಗಿಸಿದರು.ಇದೆಲ್ಲವೂ ನಡೆದಿದ್ದು ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಗಣರಾಜ್ಯೋತ್ಸವ ದಿನದ ಅಂಗವಾಗಿ ಆಯೋಜಿಸಿದ್ದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಯ ಕಲ್ಪಿತ ಪ್ರದರ್ಶನದಲ್ಲಿ.
ಗಡಿ ಸೇರಿದಂತೆ ದೇಶದ ಭಯೋತ್ಪಾದಕ ಚಟುವಟಿಕೆ ನಡೆದಾಗ ಭಾರತೀಯ ಸೇನೆ ಮಾಡುವ ಕಾರ್ಯಾಚರಣೆ ಹೇಗಿರುತ್ತದೆ ಎಂಬುದನ್ನು ತೋರಿಸಲು ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಕಲ್ಪಿತ ಪ್ರದರ್ಶನ ಏರ್ಪಡಿಸಲಾಗಿತ್ತು. ಮೊದಲಿಗೆ ಭಯೋತ್ಪಾದಕರು ಪರೇಡ್ ಮೈದಾನದ ಒಂದು ಭಾಗದಲ್ಲಿ ನಕಲಿ ಬಾಂಬ್ ಸ್ಫೋಟಿಸಿದರು. ನಂತರ ಅಲ್ಲಿಯೇ ಮನೆ ರೀತಿಯ ನೆಲೆಯಲ್ಲಿ ಅಡಗಿ ಕುಳಿತಿದ್ದರು. ಅದರ ಮಾಹಿತಿ ಪಡೆದ ಭಾರತೀಯ ಸೇನೆಯ ವಿಶೇಷ ಪಡೆಯ 13ನೇ ಪ್ಯಾರಾದ 10ಕ್ಕೂ ಹೆಚ್ಚಿನ ಯೋಧರು, ತಮ್ಮ ರೈಫಲ್‌ಗಳೊಂದಿಗೆ ತೆರಳಿ ಮೂವರು ಭಯೋತ್ಪದಕರ ಪೈಕಿ ಒಬ್ಬನನ್ನು ಹೊಡೆದುರುಳಿಸಿ, ಮತ್ತಿಬ್ಬರನ್ನು ವಶಕ್ಕೆ ಪಡೆದು ಕರೆದೊಯ್ದರು.ಇವೆಲ್ಲವೂ ನೈಜವಾಗಿಯೇ ನಡೆಯುತ್ತಿದೆ ಎಂಬಂತಿತ್ತು. ಅಲ್ಲದೆ, ಯೋಧರ ಕಾರ್ಯಾಚರಣೆ ಕೇವಲ 10 ನಿಮಿಷದಲ್ಲಿ ಮುಗಿಸಿ, ಮಿಂಚಿನ ವೇಗದಲ್ಲಿ ಅಲ್ಲಿಂದ ತೆರಳಿದರು. ನೆರೆದಿದ್ದ ಜನರೆಲ್ಲರೂ ಕಲ್ಪಿತ ಪ್ರದರ್ಶನವಾದರೂ ಯೋಧರ ಸಾಹಸವನ್ನು ಕಂಡು ಬೆರಗಾದರು. ಭಯೋತ್ಪಾದಕರನ್ನು ಸದೆಬಡಿದಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.ಕಳರಿಪಯಟ್ಟು, ಬೈಕ್ ಸಾಹಸ
ಗಣರಾಜ್ಯೋತ್ಸವ ಅಂಗವಾಗಿ ಭಾರತೀಯ ಸೇನೆಯ ಎಇಜಿ ಮತ್ತು ಕೇಂದ್ರ ತಂಡದ 15ಕ್ಕೂ ಹೆಚ್ಚಿನ ಸದಸ್ಯರು ಕಳರಿಪಯಟ್ಟು ಕಲೆಯನ್ನು ಪ್ರದರ್ಶಿಸಿದರು. ಕತ್ತಿವರಸೆ ಸೇರಿದಂತೆ ಇನ್ನಿತರ ಪಟ್ಟುಗಳನ್ನು ಪ್ರದರ್ಶಿಸಿ ನೆರೆದಿದ್ದವರನ್ನು ನಿಬ್ಬೆರಗಾಗಿಸಿದರು. ಅದೇ ರೀತಿ ಸೇನೆ ಟೋರ್ನಡೋಸ್ ತಂಡವು ಬೈಕ್‌ಗಳಲ್ಲಿ ಸಾಹಸ ಪ್ರದರ್ಶಿಸಿತು. ಕ್ರಿಸ್ ಕ್ರಾಸ್, ಬೆಂಕಿಯ ಉಂಗುರದಲ್ಲಿ ಜಿಗಿತ ಸೇರಿದಂತೆ ಹಲವು ಬಗೆಯ ಸಾಹಸವನ್ನು ಪ್ರದರ್ಶಿಸಿ, ಶಹಬ್ಬಾಸ್ ಎನಿಸಿಕೊಂಡಿತು.ಮೆಚ್ಚುಗೆ ಪಡೆದ ಸಾವಿತ್ರಿಬಾಯಿ ಪುಲೆ ನೃತ್ಯರೂಪಕ
1,400 ವಿದ್ಯಾರ್ಥಿಗಳು ಸಾವಿತ್ರಿಬಾಯಿ ಪುಲೆ ಜೀವನಗಾಥೆ ತಿಳಿಸುವ ಹಾಗೂ ದೇಶಪ್ರೇಮವನ್ನು ಸಾರುವ ನೃತ್ಯ ರೂಪಕ ಪ್ರದರ್ಶಿಸಿದರು. ಹೆಗ್ಗನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಮಕ್ಕಳು ‘ಈ ದೇಶವು ನಮಗಾಗಿಯೇ ಎಂದೆಂದಿಗೂ’ ಹಾಡಿಗೆ ಹಾಗೂ ಪಿಳ್ಳಣ್ಣ ಗಾರ್ಡನ್‌ನ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜಿನ 700 ವಿದ್ಯಾರ್ಥಿಗಳು ‘ಅಕ್ಷರದವ್ವ ಸಾವಿತ್ರಿಬಾಯಿ ಪುಲೆ’ ಹಾಡಿಗೆ ನೃತ್ಯ ಮಾಡಿದರು. ಮಕ್ಕಳ ಸಾಮೂಹಿಕ ನೃತ್ಯ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಯಿತು.38 ತಂಡಗಳಿಂದ ಪರೇಡ್ಗಣರಾಜ್ಯೋತ್ಸವ ಕವಾಯತಿನಲ್ಲಿ ಭಾರತೀಯ ಸೇನೆ, ಸಿಆರ್‌ಪಿಎಫ್, ಕೆಎಸ್‌ಆರ್‌ಪಿ, ಕೇರಳ ಪೊಲೀಸ್ ತಂಡ, ರಾಜ್ಯ ಪೊಲೀಸ್ ತಂಡ ಸೇರಿದಂತೆ ಒಟ್ಟು 38 ತುಕಡಿಗಳು ಪಾಲ್ಗೊಂಡಿದ್ದವು. ಒಟ್ಟು 1,150 ಮಂದಿ ಕವಾಯತಿನಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿ ರಾಜ್ಯಪಾಲರಿಗೆ ಗೌರವ ವಂದನೆ ಸಲ್ಲಿಸಿದರು. ಪೊಲೀಸ್ ಶ್ವಾನದಳ, ಸಮರ್ಥನಂ ಶಾಲೆ ಹಾಗೂ ರಮಣ ಮಹರ್ಷಿ ಶಾಲೆಗಳ ಅಂಗವಿಕಲ ಮಕ್ಕಳು ಕವಾಯತಿನ ಆಕರ್ಷಣೆಯಾಗಿದ್ದರು.ಬಿಗಿ ಪೊಲೀಸ್ ಬಂದೋಬಸ್ತ್
ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಣೆಗೆ ಬಂದವರಿಗಾಗಿ 7 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆಗೆ 9 ಡಿಸಿಪಿ, 16 ಎಸಿಪಿ, 46 ಇನ್‌ಸ್ಪೆಕ್ಟರ್ 109 ಪಿಎಸ್‌ಐ ಸೇರಿದಂತೆ 1 ಸಾವಿರಕ್ಕೂ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿತ್ತು. ಅದರ ಜತೆಗೆ ಪ್ರತಿ ಘಟನೆಯನ್ನೂ ಚಿತ್ರೀಕರಿಸಲು 56 ಕ್ಯಾಮೆರಾ ಸಿಬ್ಬಂದಿ ನೇಮಿಸಲಾಗಿತ್ತು. ಪರೇಡ್ ಮೈದಾನ ಹಾಗೂ ಸುತ್ತಮುತ್ತ 100 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಜತೆಗೆ 10 ಕೆಎಸ್‌ಆರ್‌ಪಿ ಮತ್ತು ಸಿಎಆರ್ ತುಕಡಿ, 2 ಆ್ಯಂಬುಲೆನ್ಸ್, 2 ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿತ್ತು.ಶಿಸ್ತು ಬದ್ಧ ಪರೇಡ್, ಉತ್ತಮ ಪ್ರದರ್ಶನಕ್ಕೆ ಪ್ರಶಸ್ತಿಶಿಸ್ತು ಬದ್ಧ ಪಥಸಂಚಲನ ಮಾಡಿದ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಮೊದಲ ಗುಂಪಿನಲ್ಲಿ ಭಾರತೀಯ ಸೇನೆ, ಬಿಎಸ್‌ಎಫ್, ಸಿಆರ್‌ಪಿಎಫ್ ಮಹಿಳಾ ತಂಡಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವು. ಎರಡನೇ ಗುಂಪಿನಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ಕಾರಾಗೃಹ ತಂಡಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವು.
ಮೂರನೇ ಗುಂಪಿನಲ್ಲಿ ರಾಷ್ಟ್ರೀಯ ಮಿಲಿಟರಿ ಶಾಲೆ, ಆರ್ಮಿ ಪಬ್ಲಿಕ್ ಶಾಲೆ, ಪ್ರೆಸಿಡೆನ್ಸಿ ಶಾಲೆ ತಂಡಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವು. ಅದೇ ರೀತಿ ಹಿರಿಯ ಬ್ಯಾಂಡ್ ವಿಭಾಗದಲ್ಲಿ ಭಾರತೀಯ ಸೇನೆ ಹಾಗೂ ಕಿರಿಯ ಸೇವಾ ವಿಭಾಗದಲ್ಲಿ ಕ್ರೈಸ್ ಜಯಂತಿ ಶಾಲೆ ತಂಡಗಳು ಪ್ರಥಮ ಬಹುಮಾನ ಪಡೆದುಕೊಂಡವು.ಪ್ರಶಸ್ತಿ ಪಡೆಯಲು ಬಿಡದ ಪೊಲೀಸರು!ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವಿಭಾಗದಲ್ಲಿ ಬಿಬಿಎಂಪಿ ಸಂಯುಕ್ತ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ಲಭಿಸಿತು. ಆದರೆ, ಕಾಲೇಜಿನ ಪ್ರಾಂಶುಪಾಲರು ಹಾಗೂ ನೃತ್ಯದ ಕೊರಿಯೋಗ್ರಾಫರ್ ಬಳಿ ಪಾಸ್ ಇದ್ದರೂ ಅವರನ್ನು ಪರೇಡ್ ಮೈದಾನದೊಳಗೆ ಬಿಡದೆ ಪೊಲೀಸರು ತಡೆದರು. ಅದರಿಂದ ತಮ್ಮ ಕಾಲೇಜಿಗೆ ಪ್ರಶಸ್ತಿ ಬಂದರೂ ಅದನ್ನು ಪಡೆಯುವಾಗ ಪ್ರಾಂಶುಪಾಲರು ಪಾಲ್ಗೊಳ್ಳದಂತಾಗಿತ್ತು.