ಕನ್ನಡಪ್ರಭ ವಾರ್ತೆ ಬೆಂಗಳೂರು
ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಎಎಸ್‌ಐ ಸಿದ್ದರಾಮ ಅವರು ನೀಡಿದ ದೂರಿನನ್ವಯ ಸಾಯಿಕುಮಾರ್ ರೆಡ್ಡಿ (26) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏ.7 ರಂದು ಎಎಸ್‌ಐ ಸಿದ್ದರಾಮ ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಮುತ್ತುರಾಜು ಅವರು ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸುತ್ತಿದ್ದರು. ಮಧ್ಯರಾತ್ರಿ 1.45 ರ ಸುಮಾರಿಗೆ ನೀಲಾದ್ರಿ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ವ್ಯಕ್ತಿಯೊಬ್ಬ ಹೊಯ್ಸಳ ವಾಹನ ನಿಲ್ಲಿಸಿ ಪಿಸಿಆರ್ ಜಂಕ್ಷನ್ ಹತ್ತಿರ ಇರುವ ಬಾರ್‌ವೊಂದರ ಶೆಟರ್ ಬಾಗಿಲನ್ನು ವ್ಯಕ್ತಿಯೊಬ್ಬ ಜೋರಾಗಿ ಬಡಿದು ನನಗೆ ಡ್ರಿಂಕ್ಸ್ ಬೇಕಾಗಿದ್ದು ಬಾಗಿಲು ತೆರೆಯುವಂತೆ ಗಲಾಟೆ ಮಾಡುತ್ತಿದ್ದಾನೆ ಎಂದು ತಿಳಿಸಿದನು.ಅದರಂತೆ ಪೊಲೀಸರು ಬಾರ್ ಹತ್ತಿರ ಹೋಗಿ ನೋಡಿದ್ದಾಗ ಒಬ್ಬ ವ್ಯಕ್ತಿ ಮದ್ಯದ ಅಮಲಿನಲ್ಲಿ ಕೂಗಾಡುತ್ತಾ ಡ್ರಿಂಕ್ಸ್ ಕೊಡುವಂತೆ ಬಾರ್ ಬಾಗಿಲನ್ನು ಜೋರಾಗಿ ಬಡಿಯುತ್ತಿದ್ದ. ಬಾರ್‌ನ ಕ್ಯಾಶಿಯರ್ ಜತೆ ಜಗಳ ಗಲಾಟೆ ಮಾಡುತ್ತಿದ್ದನು. ಈ ಬಗ್ಗೆ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಪೊಲೀಸರ ಸಮವಸ್ತ್ರ ಹಿಡಿದು ಎಳೆದಾಡಿ ಮುಖಕ್ಕೆ ಹಲ್ಲೆ ಮಾಡಿದ್ದನು. ನಂತರ ಆತನನ್ನು ಹೊಯ್ಸಳ ವಾಹನದಲ್ಲಿ ಕರೆದುಕೊಂಡು ಹೋಗುವಾಗಲು ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನು. ನಂತರ ಎಎಸ್‌ಐ ಸಿದ್ದರಾಮ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಆರೋಪಿಯ ವಿರುದ್ಧ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಏ.7 ರಂದು ಎಎಸ್‌ಐ ಸಿದ್ದರಾಮ, ಕಾನ್‌ಸ್ಟೇಬಲ್ ಮುತ್ತುರಾಜು ರಾತ್ರಿ ಕರ್ತವ್ಯದಲ್ಲಿದ್ದರು.-ಮಧ್ಯರಾತ್ರಿ ವ್ಯಕ್ತಿಯೊಬ್ಬನಿಂದ ಬಾರ್ ಬಾಗಿಲು ಬಡಿದು ಗಲಾಟೆ ಮಾಡುತ್ತಿದ್ದಾನೆ ಎಂದು ಮಾಹಿತಿ-ಬಳಿಕ ಸ್ಥಳಕ್ಕೆ ತೆರಳಿದಾಗ ಮದ್ಯದ ಅಮಲಲ್ಲಿ ಡ್ರಿಂಕ್ಸ್ ಕೊಡುವಂತೆ ಕೂಗಾಡುತ್ತಾ ಬಾಗಿಲು ಬಡಿಯುತ್ತಿದ್ದ- ಈ ಬಗ್ಗೆ ಪ್ರಶ್ನಿಸಿದಾಗ ನಿಂದಿಸಿದ್ದಲ್ಲದೇ ಪೊಲೀಸರ ಸಮವಸ್ತ್ರ ಎಳೆದಾಡಿ ಮುಖಕ್ಕೆ ಹಲ್ಲೆ ಮಾಡಿದ್ದಾನೆ
