ಸಾರಾಂಶ
ಬೆಂಗಳೂರು : ತನ್ನ ಪರಿತ್ಯಕ್ತ ಪತಿಯ ಆಶ್ರಯದಲ್ಲಿದ್ದ ಏಳು ವರ್ಷದ ಮಗನನ್ನು ಸ್ನೇಹಿತನ ಜತೆ ಸೇರಿ ತಾಯಿ ಅಪಹರಿಸಿಕೊಂಡು ಪರಾರಿ ಆಗಿರುವ ಘಟನೆ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಕೊಡಿಗೇಹಳ್ಳಿ ನಿವಾಸಿ ಸಿದ್ಧಾರ್ಥ್ ಪುತ್ರ ಅಪಹೃತವಾಗಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ಅವರ ಪತ್ನಿ ಅನುಪಮಾ ಹಾಗೂ ಆಕೆಯ ಗೆಳೆಯನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶಾಲೆಗೆ ತೆರಳಲು ಬಸ್ಸಿಗೆ ಕಾಯುತ್ತ ತಾತನ ಜತೆ ಮನೆ ಮುಂದೆ ನಿಂತಿದ್ದಾಗ ಏಕಾಏಕಿ ನುಗ್ಗಿ ಮಗನನ್ನು ಬಲವಂತದಿಂದ ಅನುಪಮಾ ಕರೆದೊಯ್ದಿದ್ದಾರೆ. ಈ ಘಟನೆ ಬಗ್ಗೆ ಕೆ.ಆರ್.ಪುರ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2014ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಅನುಪಮಾ ಹಾಗೂ ಕೊಡಿಗೇಹಳ್ಳಿಯ ಸಾಫ್ಟ್‌ವೇರ್ ಉದ್ಯೋಗಿ ಸಿದ್ಧಾರ್ಥ್ ವಿವಾಹವಾಗಿದ್ದು, ಈ ದಂಪತಿಗೆ 7 ವರ್ಷದ ಮಗನಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 2020ರಿಂದ ದಂಪತಿ ಪ್ರತ್ಯೇಕವಾಗಿದ್ದಾರೆ. ಚೆನ್ನೈನ ತನ್ನ ಗೆಳೆಯನ ಜತೆ ಅನುಪಮಾ ಲಿವಿಂಗ್ ಟು ಗೆದರ್‌ನಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಚೆನ್ನೈ ನಗರದಲ್ಲಿ ತನ್ನ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಆಕೆ ದೂರು ನೀಡಿದ್ದಳು. ಅಲ್ಲದೆ ಪತ್ನಿ ನಡವಳಿಕೆ ಮೇಲೆ ಬೇಸರಗೊಂಡು ದೂರವಾಗಿದ್ದ ಸಿದ್ಧಾರ್ಥ್, ವಿಚ್ಛೇದನ ಕೋರಿ ನ್ಯಾಯಾಲಯ ಮೊರೆ ಹೋಗಿದ್ದರು.
ಈ ಕೌಟುಂಬಿಕ ಕಲಹ ಬಳಿಕ ಬಾಲ ಸಂರಕ್ಷಣಾ ಸಮಿತಿ (ಸಿಡಬ್ಲ್ಯುಸಿ)ಯು ಮಗನನ್ನು ಸಿದ್ಧಾರ್ಥ್‌ನ ಸುಪರ್ದಿಗೆ ನೀಡಿದ್ದು, ತಾಯಿಗೆ ವಾರದಲ್ಲಿ ಒಂದು ಬಾರಿ ಭೇಟಿಗೆ ಅವಕಾಶ ನೀಡಿತ್ತು. ಅಲ್ಲದೆ ಮಗನ ಜತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುವ ಅವಕಾಶವನ್ನು ಸಿಡಬ್ಲ್ಯುಸಿ ಅನುಮತಿ ಕೊಟ್ಟಿತ್ತು. ಆದರೆ ಮಗನನ್ನು ತನ್ನ ಸುಪರ್ದಿಗೆ ಪಡೆಯಲು ಆಕೆ ಯತ್ನಿಸಿದ್ದಳು. ಹೀಗಿರುವಾಗ ಚೆನ್ನೈ ನಗರಕ್ಕೆ ನ್ಯಾಯಾಲಯದ ವಿಚಾರಣೆ ಸಲುವಾಗಿ ಸಿದ್ಧಾರ್ಥ್ ತೆರಳಿದ್ದರು. ಈ ವಿಚಾರ ತಿಳಿದ ಅನುಪಮಾ, ಶಾಲೆಗೆ ತೆರಳಲು ಮನೆಯಿಂದ ಹೊರಬಂದ ಮಗನನ್ನು ತನ್ನ ಗೆಳೆಯನ ಜತೆ ಅಪಹರಿಸಿಕೊಂಡು ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಹೋಗೊಲೊಪ್ಪದ ಬಾಲಕ
ತನ್ನೊಂದಿಗೆ ಬರಲೊಪ್ಪದ ಮಗನನ್ನು ಅನುಪಮಾ ಬಲವಂತವಾಗಿ ಕರೆದೊಯ್ದಿದ್ದಾಳೆ. ಕಾರಿನಲ್ಲಿ ಬಂದಿಳಿದು ತನ್ನನ್ನು ಕರೆದೊಯ್ಯಲು ಮುಂದಾದಾಗ ತಾಯಿಗೆ ಬಾಲಕ ಪ್ರತಿರೋಧ ತೋರಿದ್ದಾನೆ. ಮಗ ಒದ್ದಾಡಿದರೂ ಬಿಡದೆ ಆಕೆ ಹಠದಿಂದ ಕರೆದುಕೊಂಡು ಹೋಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಬಾಲಕನ ರಕ್ಷಣೆ ಸವಾಲು
ಈ ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು, ಅನುಪಮಾಳನ್ನು ಸಂಪರ್ಕಿಸಲು ಆಕೆಯ ಮೊಬೈಲ್‌ಗೆ ಕರೆ ಮಾಡಿದ್ದಾಗ ಮೊಬೈಲ್ ಸ್ವಿಚ್ಛ್ ಆಪ್ ಆಗಿತ್ತು. ಹೀಗಾಗಿ ಆಕೆಯ ಸುಪರ್ದಿಯಲ್ಲಿರುವ ಮಗನ ರಕ್ಷಣೆಗೆ ಪೊಲೀಸರು ಪ್ರಯತ್ನ ನಡೆಸಿದ್ದಾರೆ. ಈ ಸಂಬಂಧ ಚೆನ್ನೈಗೆ ಪೊಲೀಸರ ತಂಡ ಸಹ ತೆರಳಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.