ಸಾರಾಂಶ
ಬೆಂಗಳೂರು : ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ವಿಚ್ ಬೋರ್ಡ್‌ಗೆ ವೈರ್ ಸಿಕ್ಕಿಸುವಾಗ ವಿದ್ಯುತ್ ಪ್ರವಹಿಸಿ ಕಾರ್ಮಿಕ ಮೃತಪಟ್ಟಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ಬಿಫುಲ್ ಕುಮಾರ್ (29) ಮೃತ ಕಾರ್ಮಿಕ. ಕಾಡುಗೋಡಿ ಬೆಳತ್ತೂರು ರಸ್ತೆಯ ಕುಂಬೇನ ಅಗ್ರಹಾರದಲ್ಲಿ ಜೂ.4ರಂದು ರಾತ್ರಿ ಸುಮಾರು 10.30ಕ್ಕೆ ಈ ಘಟನೆ ನಡೆದಿದೆ. ಮೃತನ ಸಹೋದರ ಪವನ್ ಕುಮಾರ್ ನೀಡಿದ ದೂರಿನ ಮೇರೆಗೆ ಗುತ್ತಿಗೆದಾರ ಚಿನಾರಾಮ್ ಕುಮವತ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಫುಲ್ ಕುಮಾರ್ 10 ದಿನಗಳ ಹಿಂದೆ ಬಿಹಾರದಿಂದ ಬೆಂಗಳೂರಿಗೆ ಬಂದಿದ್ದರು. ಗುತ್ತಿಗೆದಾರ ಚಿನಾರಾಮ್ ಕುಮವತ್ ಜತೆಗೆ ಕುಂಬೇನ ಅಗ್ರಹಾರದ ರಾಮಾಂಜನೇಯ ಮಾಲೀಕತ್ವದ ನಿರ್ಮಾಣ ಹಂತದ ಕಟ್ಟಡದಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದರು. ಗುತ್ತಿಗೆದಾರ ಕಾರ್ಮಿಕರು ಉಳಿದುಕೊಳ್ಳಲು ಅದೇ ಕಟ್ಟದ ನೆಲಮಹಡಿಯಲ್ಲಿ ವ್ಯವಸ್ಥೆ ಮಾಡಿದ್ದರು.
ಸ್ವಿಚ್ ಬೋರ್ಡ್‌ಗೆ ವೈರ್ ಸಿಕ್ಕಿಸುವಾಗ ಶಾಕ್:
ಜೂ.4ರಂದು ಬಿಫುಲ್ ಕುಮಾರ್ ಸೇರಿ ಮೂವರು ಕಾರ್ಮಿಕರು ರಾತ್ರಿ 9.30ಕ್ಕೆ ಟೈಲ್ಸ್ ಕೆಲಸ ಮುಗಿಸಿ ನೆಲಮಹಡಿಗೆ ಮಲಗಲು ಬಂದಿದ್ದಾರೆ. ಈ ವೇಳೆ ಲೈಟ್ ಆಫ್ ಆಗಿದ್ದ ಹಿನ್ನೆಲೆಯಲ್ಲಿ ಬಿಫುಲ್ ಕುಮಾರ್ ಮೊಬೈಲ್ ಟಾರ್ಚ್ ಆನ್ ಮಾಡಿಕೊಂಡು ಲೈಟ್ ಆನ್ ಮಾಡಲು ಮುಂದಾಗಿದ್ದಾರೆ. ಬಾತ್ ರೂಮ್‌ನ ಕಿಟಕಿ ಮೇಲಿದ್ದ ಸ್ವಿಚ್ ಬೋರ್ಡ್‌ಗೆ ವೈರ್ ಸಿಕ್ಕಿಸಲು ಕಬ್ಬಿಣದ ಸ್ಟೂಲ್ ಮೇಲೆ ಹತ್ತಿ ವೈರ್ ಸಿಕ್ಕಿಸಲು ಮುಂದಾದಾಗ ವಿದ್ಯುತ್ ಪ್ರವಹಿಸಿ ಕೆಳಗೆ ಬಿದ್ದು ಬಿಫುಲ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುತ್ತಿಗೆದಾರನ ವಿರುದ್ಧ ದೂರು
ಗುತ್ತಿಗೆದಾರ ಚಿನಾರಾಮ್ ಕಾರ್ಮಿಕರು ತಂಗಲು ಸರಿಯಾದ ವ್ಯವಸ್ಥೆ ಮಾಡದೆ ಹಾಗೂ ಯಾವುದೇ ಸುರಕ್ಷತಾ ಪರಿಕರಗಳನ್ನು ಒದಗಿಸದ ಪರಿಣಾಮ ಬಿಫುಲ್ ಕುಮಾರ್ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾನೆ. ಸಹೋದರನ ಸಾವಿಗೆ ಚಿನಾರಾಮ್ ನಿರ್ಲಕ್ಷ್ಯವೇ ಕಾರಣವಾಗಿದ್ದು, ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮೃತನ ತಮ್ಮ ಪವನ್ ಕುಮಾರ್ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.