ಜಾಮೀನು ಕೊಡಿಸಿ ಕಳ್ಳತನ ಮಾಡಿಸುತ್ತಿದ್ದ ರೌಡಿ ದಂಪತಿ

| Published : Nov 06 2024, 01:15 AM IST

ಸಾರಾಂಶ

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಲ್ಲಿದ್ದವರಿಗೆ ಜಾಮೀನು ಕೊಡಿಸಿ ಹೊರ ಕರೆತಂದು ಸಿನಿಮೀಯ ಶೈಲಿಯಲ್ಲಿ ಕಳ್ಳತನ ಮಾಡಿಸುತ್ತಿದ್ದ ಚಾಲಾಕಿ ರೌಡಿ ದಂಪತಿ ಹಾಗೂ ಆತನ ಸಹಚರರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಲ್ಲಿದ್ದವರಿಗೆ ಜಾಮೀನು ಕೊಡಿಸಿ ಹೊರ ಕರೆತಂದು ಸಿನಿಮೀಯ ಶೈಲಿಯಲ್ಲಿ ಕಳ್ಳತನ ಮಾಡಿಸುತ್ತಿದ್ದ ಚಾಲಾಕಿ ರೌಡಿ ದಂಪತಿ ಹಾಗೂ ಆತನ ಸಹಚರರನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ.

ಬಸವೇಶ್ವರನಗರದ ರೌಡಿ ಗೌತಮ್‌ ಶೆಟ್ಟಿ, ಆತನ ಪತ್ನಿ ಶಿಬಾ ಅಲಿಯಾಸ್ ಚಂದನ, ಸಹಚರರಾದ ಆಂದ್ರಹಳ್ಳಿಯ ಮಾಣಿಕ್ಯ ಅಲಿಯಾಸ್ ಮಣಿಕಾಂತ್‌, ನರಸಿಂಹ ನಾಯಕ್‌ ಹಾಗೂ ದಯಾನಂದ್ ಬಂಧಿತರಾಗಿದ್ದು, 325 ಗ್ರಾಂ ಚಿನ್ನಾಭರಣ ಹಾಗೂ 1.8 ಕೇಜಿ ಬೆಳ್ಳಿ ವಸ್ತುಗಳು ಸೇರಿದಂತೆ ₹21 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಎಚ್‌ಎಂಟಿ ಲೇಔಟ್‌ ಸಮೀಪ ಒಂದೇ ಕಟ್ಚಡದಲ್ಲಿ ಮನೆ ಮಾಲೀಕ ಹಾಗೂ ಬಾಡಿಗೆದಾರ ಮನೆಗಳಲ್ಲಿ ಕಳ್ಳತನ ನಡೆದಿದ್ದವು. ಈ ಬಗ್ಗೆ ತನಿಖೆಗಿಳಿದ ಇನ್‌ಸ್ಪೆಕ್ಟರ್‌ ಎಂ.ಎಸ್‌.ಅನಿಲ್‌ ಕುಮಾರ್ ನೇತೃತ್ವದ ತಂಡವು, ಘಟನಾ ಸ್ಥಳದಲ್ಲಿ ಸಂಗ್ರಹಿಸಿದ್ದ ಬೆರಳಚ್ಚು ಮುದ್ರೆಗಳನ್ನು ಹಳೇ ಮನೆಗಳ್ಳತನ ಪ್ರಕರಣಗಳ ಆರೋಪಿಗಳಿಗೆ ಹೋಲಿಸಿದಾಗ ಮಾಣಿಕ್ಯನಿಗೆ ಹೊಂದಾಣಿಕೆಯಾಗಿದೆ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆಗಿಳಿದಾಗ ಮಾಣಿಕ್ಯ ಸೇರಿದಂತೆ ಐವರು ಸಿಕ್ಕಿಬಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನಲ್ಲಿ ತಂಡ ಕಟ್ಟಿದ ಗೌತಮ್‌: ಗೌತಮ್‌ ಹಾಗೂ ಮಾಣಿಕ್ಯ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಇವರ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಗೌತಮ್ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ರೌಡಿಪಟ್ಟಿ ಸಹ ತೆರೆಯಲಾಗಿದೆ. ಆರು ವರ್ಷಗಳ ಹಿಂದೆ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಸೇರಿದ್ದಾಗ ಆತನಿಗೆ ಮನೆಗಳ್ಳತನ ಪ್ರಕರಣದ ಆರೋಪಿ ಮಾಣಿಕ್ಯನ ಪರಿಚಯವಾಗಿದೆ. ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ. ಇದೇ ಸ್ನೇಹದಲ್ಲಿ ಜೈಲಿನಿಂದ ಹೊರಬಂದ ನಂತರ ಮನೆಗಳ್ಳತನ ಕೃತ್ಯಗಳಿಗೆ ಗೌತಮ್‌ಗೆ ಮಾಣಿಕ್ಯ ಸಾಥ್ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಲಿನಲ್ಲಿ ಜಾಮೀನು ಪಡೆಯಲು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದ ವಿಚಾರಣಾಧೀನ ಕೈದಿಗಳಿಗೆ ಗೌತಮ್ ಗಾಳ ಹಾಕಿದ್ದ. ಆಗಲೇ ಆತನಿಗೆ ಮಾಣಿಕ್ಯ ಸಿಕ್ಕಿದ್ದಾನೆ. ತರುವಾಯ ಗೌತಮ್‌ಗೆ ಮಾಣಿಕ್ಯನ ಮೂಲಕ ನರಸಿಂಹ ಹಾಗೂ ದಯಾನಂದ್‌ ಸಂಪರ್ಕಕ್ಕೆ ಬಂದಿದ್ದಾರೆ. ಜೈಲಿನಲ್ಲಿದ್ದ ಮಾಣಿಕ್ಯನಿಗೆ ಜಾಮೀನು ಕೊಡಿಸಿ ಹೊರತಂದ ಗೌತಮ್ ದಂಪತಿ, ಆತನ ಮುಖೇನ ನಗರದಲ್ಲಿ ಮನೆಗಳ್ಳತನ ಕೃತ್ಯಗಳನ್ನು ಎಸಗುತ್ತಿದ್ದರು.

ಹಗಲು ಹೊತ್ತಿನಲ್ಲಿ ಜನವಸತಿ ಪ್ರದೇಶಗಳಲ್ಲಿ ಗೌತಮ್ ದಂಪತಿ ಅಡ್ಡಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿದ್ದರು. ನಂತರ ಆ ನಿಗದಿತ ಮನೆಗಳಿಗೆ ರಾತ್ರಿ ವೇಳೆ ಇನ್ನುಳಿದ ಮೂವರು ಕಳ್ಳತನ ಮಾಡುತ್ತಿದ್ದರು. ಹೀಗೆ ದೋಚಿದ್ದ ಚಿನ್ನಾಭರಣಗಳನ್ನು ಗೌತಮ್‌ ಪತ್ನಿ ಶಿಬಾ ಮೂಲಕ ವಿಲೇವಾರಿ ಮಾಡಿಸುತ್ತಿದ್ದರು. ಅಂತೆಯೇ ಎಚ್‌ಎಂಟಿ ಲೇಔಟ್‌ನಲ್ಲಿ ಶಿಬಾ ಗುರುತಿಸಿದ್ದ ಮನೆಗಳ ಬೀಗ ಮುರಿದು ಮಾಣಿಕ್ಯ ಕಳ್ಳತನ ಮಾಡಿದ್ದ. ಈ ಕೃತ್ಯದಲ್ಲಿ ಬೆರಳಚ್ಚು ಆರೋಪಿಗಳ ಸುಳಿವು ನೀಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಆರೋಪಿಗಳು ಒಂದೆಡೆ ನೆಲೆ ನಿಲ್ಲುತ್ತಿರಲಿಲ್ಲ. ಕೆಲವು ದಿನಗಳಿಂದ ಆಂದ್ರಹಳ್ಳಿಯಲ್ಲಿ ಬಾಡಿಗೆ ರೂಮ್ ಪಡೆದು ಆರೋಪಿಗಳು ತಂಗಿದ್ದರು. ಒಂದು ಕಡೆ ವಾಸವಾದರೆ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಪದೇ ಪದೇ ಆರೋಪಿಗಳು ನೆಲೆ ಬದಲಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.