ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ವಿದ್ಯುತ್ ಅವಘಡ ಸಂಭವಿಸಿ ಪ್ರತ್ಯೇಕ ಪ್ರಕರಣದಲ್ಲಿ ತಾಲೂಕಿನ ಮಾರಗೌಡನಹಳ್ಳಿ ಮತ್ತು ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.ತಾಲೂಕಿನ ಮಾರಗೌಡನಹಳ್ಳಿ ಗ್ರಾಮದ ತನ್ನ ಜಮಿನಿನಲ್ಲಿ ಬೆಳೆದಿರುವ ಅರಿಶಿಣಕ್ಕೆ ನೀರು ಹಾಯಿಸಲು ಹೋಗಿ ಪಂಪ್ ಸೆಟ್ ವಿದ್ಯುತ್ ತಂತಿ ತುಂಡಾಗಿ ಕೆಳಗೆ ಬಿದ್ದಿರುವುದರಿಂದ ಹಾಗೂ ಕೆಸ್ತೂರು ಕೊಪ್ಪಲು ಗ್ರಾಮದ ತನ್ನ ಹಳೆಯ ಮನೆಯನ್ನು ದುರಸ್ತಿ ಮಾಡಿಸುತ್ತಿರುವ ಸಂದರ್ಭದಲ್ಲಿ ಕೆಟ್ಟು ನಿಂತಿರುವ ಮೋಟಾರನ್ನು ಸರಿಪಡಿಸಲು ನೀರಿನ ತೊಟ್ಟಿಗೆ ಇಳಿದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.
ತಾಲೂಕಿನ ಅಡಗೂರು ಮಾರಗೌಡನಹಳ್ಳಿ ಗ್ರಾಮದ ಮಹದೇವ್ (58) ತನ್ನ ಜಮಿನಿನಲ್ಲಿ ಬೆಳೆದಿರುವ ಅರಿಶಿಣಕ್ಕೆ ನೀರು ಹಾಯಿಸಲು ಹೋದ ಸಂದರ್ಭದಲ್ಲಿ ಪಕ್ಕದ ಸುರೇಶ್ ಅವರ ಕಬ್ಬಿನ ಗದ್ದೆಯಲ್ಲಿ ಪಂಪ್ ಸೆಟ್ ವಿದ್ಯುತ್ ತಂತಿ ತುಂಡಾಗಿ ನೆಲಕ್ಕೆ ಬಿದುದ್ದರಿಂದ ಇದನ್ನು ಆಕಸ್ಮಿಕವಾಗಿ ತುಳಿದ ಮಹದೇವ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಲಕ್ಷ್ಮಮ್ಮ, ಮೂವರು ಪುತ್ರಿಯರು ಇದ್ದಾರೆ.ಕೆಸ್ತೂರು ಕೊಪ್ಪಲು ಗ್ರಾಮದ ರಮೇಶ್ ಅವರ ಪುತ್ರ ಪುನೀತ್ (22) ಇವರು ತನ್ನ ಹಳೆಯ ಮನೆಯನ್ನು ದುರಸ್ತಿ ಮಾಡಿಸುತ್ತಿದ್ದು, ನೀರಿನ ತೊಟ್ಟಿಯಿಂದ ನೀರು ಮೇಲೆತ್ತುವ ಮೋಟಾರ್ ಕೆಟ್ಟುಹೋಗಿದ್ದರಿಂದ ಅದನ್ನು ಸರಿಪಡಿಸಲು ನೀರಿನ ತೊಟ್ಟಿಗೆ ಇಳಿದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ದಾಖಲಾಗಿಸಲಾಗಿದೆ.
ಪುನೀತ್ ಕಳೆದ ಒಂದು ತಿಂಗಳ ಹಿಂದೆ ವಿವಾಹವಾಗಿದ್ದು, ಪತ್ನಿ ಬೇಬಿ ಇದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಡಿ.ರವಿಶಂಕರ್ ಬೆಳಗ್ಗೆ ಮಾರಗೌಡನಹಳ್ಳಿ ಗ್ರಾಮಕ್ಕೆ ತೆರಳಿ ಅವಘಡದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಸರ್ಕಾರದಿಂದ ಬರುವ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದರು.
ಆನಂತರ ಕೆಸ್ತೂರು ಕೊಪ್ಪಲು ಗ್ರಾಮಕ್ಕೂ ತೆರಳಿ 22 ವರ್ಷದ ಯುವಕ ವಿದ್ಯುತ್ ನಿಂದ ಮೃತಪಟ್ಟಿರುವುದಕ್ಕೆ ಮರುಕ ವ್ಯಕ್ತಪಡಿಸಿ, ಈತನ ಕುಟುಂಬಕ್ಕೂ ಸರ್ಕಾರದಿಂದ ಸಹಾಯ ಕೊಡಿಸುವ ಭರವಸೆ ನೀಡಿದಲ್ಲದೆ, ಇವರ ಅಂತ್ಯ ಸಂಸ್ಕಾರ ನಡೆಸಲು ಮೃತರ ಕುಟುಂಬದವರಿಗೆ ವಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿದರು.ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮೇಗೌಡ, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್. ಸ್ವಾಮಿ, ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಉಪಾಧ್ಯಕ್ಷ ಮಂಜುನಾಥ್, ಸೆಸ್ಕ್‌ಎಇಇ ಅರ್ಕೇಶ್ ಮೂರ್ತಿ, ಜೆಇಗಳಾದ ಪ್ರಸನ್ನ, ಚಂದ್ರಶೇಖರ್, ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದರು.