ಸ್ವಿಗ್ಗಿ ಡೆಲಿವರಿ ಬಾಯ್‌ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಸಿ ಮೊಬೈಲ್‌ ಕಳವು ಮಾಡಿದ್ದ ಕ್ಯಾಬ್‌ ಚಾಲಕನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ವೈಟ್‌ಫೀಲ್ಡ್‌ನ ನಾಗಗೊಂಡನಹಳ್ಳಿ ನಿವಾಸಿ ಸುನೀಲ್ ಕುಮಾರ್(23) ಬಂಧಿತ.

 ಬೆಂಗಳೂರು : ಸ್ವಿಗ್ಗಿ ಡೆಲಿವರಿ ಬಾಯ್‌ನನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಬೆದರಿಸಿ ಮೊಬೈಲ್‌ ಕಳವು ಮಾಡಿದ್ದ ಕ್ಯಾಬ್‌ ಚಾಲಕನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ವೈಟ್‌ಫೀಲ್ಡ್‌ನ ನಾಗಗೊಂಡನಹಳ್ಳಿ ನಿವಾಸಿ ಸುನೀಲ್ ಕುಮಾರ್(23) ಬಂಧಿತ. ಶನಿವಾರ ರಾತ್ರಿ ಸುಮಾರು 12 ಗಂಟೆಗೆ ಕಾಡುಗೋಡಿ ಠಾಣೆ ವ್ಯಾಪ್ತಿಯ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿದೆ. ಸ್ವಿಗ್ಗಿ ಡೆಲಿವರಿ ಬಾಯ್‌ ಅಂಬೇಡ್ಕರ್‌ ನಗರದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅದೇ ಮಾರ್ಗದಲ್ಲಿ ಕ್ಯಾಬ್‌ನಲ್ಲಿ ಬಂದ ಸುನೀಲ್‌, ಬೆದರಿಸಿ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಡೆಲಿವರಿ ಬಾಯ್‌ 112 ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು. 

ನಿಯಂತ್ರಣ ಕೊಠಡಿಯಿಂದ ಬಂದ ಮಾಹಿತಿ

ಈ ಬಗ್ಗೆ ನಿಯಂತ್ರಣ ಕೊಠಡಿಯಿಂದ ಬಂದ ಮಾಹಿತಿ ಮೇರೆಗೆ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಕಾಡುಗೋಡಿ ಠಾಣೆಯ ಎಎಸ್‌ಐ ವೆಂಕಟರಾಮು, ಹೆಡ್‌ ಕಾನ್ಸ್‌ಟೇಬಲ್‌ ಅನಿಲ್‌ ಕುಮಾರ್‌ ಐದೇ ನಿಮಿಷಕ್ಕೆ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಆ ಡೆಲಿವರಿ ಬಾಯ್‌ ಮೊಬೈಲ್‌ಗೆ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ಆರೋಪಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಬೆಚ್ಚಿಬಿದ್ದ ಆರೋಪಿ ಸುನೀಲ್

ಇದರಿಂದ ಬೆಚ್ಚಿಬಿದ್ದ ಆರೋಪಿ ಸುನೀಲ್, ಪೊಲೀಸರು ಇರುವಲ್ಲಿಗೆ ಬಂದು ಮೊಬೈಲ್‌ ಕೊಟ್ಟು ಪರಾರಿಯಾಗಲು ಯತ್ನಿಸಿದ್ದಾನೆ. ಆದರೂ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ಘಟನೆ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣವನ್ನು ವೈಟ್‌ಫೀಲ್ಡ್‌ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.