ಸಾರಾಂಶ
ಬೆಂಗಳೂರು : ವಾಯು ವಿಹಾರ ಮಾಡುವ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋವಿಂದಪುರ ನಿವಾಸಿ ಶರತ್(28) ಮತ್ತು ವಿದ್ಯಾರಣ್ಯಪುರ ನಿವಾಸಿ ಶರವಣ(23) ಬಂಧಿತರು. ಆರೋಪಿಗಳಿಂದ ಸುಮಾರು 4.15 ಲಕ್ಷ ರು. ಮೌಲ್ಯದ 60 ಗ್ರಾಂ ತೂಕದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 2 ಬೈಕ್ ಜಪ್ತಿ ಮಾಡಲಾಗಿದೆ.
ಯಲಹಂಕ ಶಿವನಹಳ್ಳಿ ಅಪಾರ್ಟ್‌ಮೆಂಟ್ ನಿವಾಸಿಯಾಗಿರುವ ಮಹಿಳೆಯೊಬ್ಬರು ನ.5ರಂದು ಜಕ್ಕೂರು ಮುಖ್ಯರಸ್ತೆಯಲ್ಲಿ ವಾಯು ವಿಹಾರ ಮಾಡುವಾಗ, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸುಮಾರು 21 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಒಂಟಿ ಮಹಿಳೆಯರೇ ಟಾರ್ಗೆಟ್ : ಪ್ರಕರಣದ ತನಿಖೆ ವೇಳೆ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಅಲ್ಲಾಳಸಂದ್ರದ ಮೇಲ್ಸೇತುವೆ ಬಳಿ ಇಬ್ಬರು ವ್ಯಕ್ತಿಗಳನ್ನು ಬೈಕ್ ಸಮೇತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾವೇ ಸರಗಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರ ಮಾಡುವ ಒಂಟಿ ಮಹಿಳೆಯರನ್ನೇ ಗುರಿಯಾಗಿಸಿ ಸರಗಳವು ಮಾಡುತ್ತಿದ್ದರು. ಬಳಿಕ ಚಿನ್ನಾಭರಣಗಳನ್ನು ಪರಿಚಿತರು, ಫೈನಾನ್ಸ್ ಕಂಪನಿಗಳಲ್ಲಿ ಅಡಮಾನವಿರಿಸಿ ಹಣ ಪಡೆದು ಮೋಜು-ಮಸ್ತಿ ಮಾಡುತ್ತಿದ್ದರು.
ಆರೋಪಿಗಳ ಬಂಧನದಿಂದ ಯಲಹಂಕ, ವಿದ್ಯಾರಣ್ಯಪುರ ಹಾಗೂ ಕೆ.ಆರ್.ಪುರ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಸೇರಿ ಒಟ್ಟು ಮೂರು ಸರಗಳವು ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.