ಬೆಂಗಳೂರು : ‘ನೀನು ಸಲಿಂಗಿಯಾ’ ಪ್ರಶ್ನೆಗೆ ಉತ್ತರ ನೀಡದವಗೆ ಹಲ್ಲೆ ಮಾಡಿದ ಅಪರಿಚಿತ

| Published : Jan 17 2025, 01:45 AM IST / Updated: Jan 17 2025, 04:24 AM IST

ಸಾರಾಂಶ

ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ವೊಂದರ ಶೌಚಾಲಯದಲ್ಲಿ ಅಪರಿಚಿತ ವ್ಯಕ್ತಿ ‘ನೀನು ಗೇ ನಾ’ ಎಂದು ಪ್ರಶ್ನಿಸಿ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 ಬೆಂಗಳೂರು : ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ವೊಂದರ ಶೌಚಾಲಯದಲ್ಲಿ ಅಪರಿಚಿತ ವ್ಯಕ್ತಿ ‘ನೀನು ಗೇ ನಾ’ ಎಂದು ಪ್ರಶ್ನಿಸಿ ಯುವಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬ್ರಿಗೇಡ್‌ ರಸ್ತೆಯ ಪ್ಯಾಂಜೋ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಜ.10ರ ರಾತ್ರಿ ಈ ಘಟನೆ ನಡೆದಿದೆ. ಕಾಕ್ಸ್‌ಟೌನ್‌ ನಿವಾಸಿ ವಿನಯ್‌ ರೂಪಾನಿ (23) ಹಲ್ಲೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಏನಿದು ಘಟನೆ?:

ದೂರುದಾರ ವಿನಯ್‌ ರೂಪಾನಿ ಜ.10ರಂದು ರಾತ್ರಿ ಸುಮಾರು 10 ಗಂಟೆಗೆ ತನ್ನ ಇಬ್ಬರು ಸ್ನೇಹಿತೆಯರ ಜತೆಗೆ ಬ್ರಿಗೇಡ್‌ ರಸ್ತೆಯ ಪ್ಯಾಂಜೋ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಊಟಕ್ಕೆ ತೆರಳಿದ್ದರು. ಊಟ ಮುಗಿಸಿದ ಬಳಿಕ ವಿನಯ್‌ ಶೌಚಾಲಯಕ್ಕೆ ತೆರಳಿದ್ದಾರೆ. ಈ ವೇಳೆ ಅಲ್ಲೇ ಇದ್ದ ಅಪರಿಚಿತ ವ್ಯಕ್ತಿ ವಿನಯ್‌ ಹತ್ತಿರಕ್ಕೆ ಬಂದು ‘ನೀನು ಗೇನಾ’ ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ವಿನಯ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವೇಳೆ ಆ ಅಪರಿಚಿತ ವ್ಯಕ್ತಿ ವಿನಯ್‌ನನ್ನು ಅಡ್ಡಗಟ್ಟಿ ನೀನು ಗೇನಾ ಎಂದು ಹಲವು ಬಾರಿ ಪ್ರಶ್ನಿಸಿದ್ದಾನೆ.

ತಲೆಗೆ ಹಲ್ಲೆ:

ಆಗಲೂ ವಿನಯ್‌ ಯಾವುದೇ ಪ್ರತಿಕ್ರಿಯೆ ನೀಡದೆ ಮುಂದೆ ಹೋಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿ ವಿನಯ್‌ ತಲೆ ಮೇಲೆ ಎರಡು ಬಾರಿ ಹೊಡೆದಿದ್ದಾನೆ. ಬಳಿಕ ಗೆಳೆತಿಯರ ಬಳಿ ಬಂದಿರುವ ವಿನಯ್‌, ಶೌಚಾಲಯದಲ್ಲಿ ನಡೆದ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೇಳೆ ಗೆಳತಿಯರು ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವ ಮುನ್ನವೇ ಆ ಅಪರಿಚಿತ ವ್ಯಕ್ತಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಿಂದ ಪರಾರಿಯಾಗಿದ್ದಾನೆ.

ಈ ಸಂಬಂಧ ವಿನಯ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು, ಅಪರಿಚಿತ ವ್ಯಕ್ತಿಯ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.