ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿರುವ ಘಟನೆ.

 ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೊಯ್ಸಳ ನಗರ ನಿವಾಸಿ ಮನೋಜ್(22) ಕೊಲೆಯಾದ ದುರ್ದೈವಿ. ಶನಿವಾರ ಮುಂಜಾನೆ ಸುಮಾರು 3 ಗಂಟೆಗೆ ಹೊಯ್ಸಳ ನಗರದ ಮೂರನೇ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಕೊಲೆಯಾದ ಮನೋಜ್‌ ಪದವಿ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿದ್ದ. ಗೋ-ಫಿಜ್ಜಾದಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ಮುಂಜಾನೆ ಹೊಯ್ಸಳನಗರದ ಮೂರನೇ ಮುಖ್ಯರಸ್ತೆಯಲ್ಲಿ ಮನೋಜ್‌ ಸ್ನೇಹಿತರ ಜತೆಗೆ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಎದುರಿನಿಂದ ಬಂದ ವ್ಯಕ್ತಿಯೊಬ್ಬ ಮನೋಜ್‌ನನ್ನು ಗುರಾಯಿಸಿದ್ದಾನೆ. ಅಷ್ಟಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಆ ವ್ಯಕ್ತಿ ಬಲವಾದ ಆಯುಧದಿಂದ ಮನೋಜ್‌ನ ತಲೆ ಮೇಲೆ ಹಲ್ಲೆಗೈದು ಪರಾರಿಯಾಗಿದ್ದಾನೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮನೋಜ್‌ನನ್ನು ಸ್ನೇಹಿತರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಂಭೀರ ಗಾಯ ಹಾಗೂ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮನೋಜ್‌ ಮೃತಪಟ್ಟಿದ್ದಾನೆ. ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.