ಸಾರಾಂಶ
ರಸ್ತೆ ಬದಿ ನಿಂತಿದ್ದ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಲಾರಿಗೆ ಹಿಂದಿನಿಂದ ಸ್ಕೂಟರ್ ಡಿಕ್ಕಿಯಾಗಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ಮೃತಪಟ್ಟಿರುವ ಘಟನೆ ಎಚ್‌ಎಎಲ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಸ್ತೆ ಬದಿ ನಿಂತಿದ್ದ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಲಾರಿಗೆ ಹಿಂದಿನಿಂದ ಸ್ಕೂಟರ್ ಡಿಕ್ಕಿಯಾಗಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬ ಮೃತಪಟ್ಟಿರುವ ಘಟನೆ ಎಚ್‌ಎಎಲ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕತ್ರಿಗುಪ್ಪೆ ನಿವಾಸಿ ಅನೀಶ್ ಅಯ್ಯಪ್ಪನ್ (23) ಮೃತ ದುರ್ದೈವಿ. ಈ ಘಟನೆಯಲ್ಲಿ ಗಾಯಗೊಂಡಿರುವ ಮೃತನ ಸ್ನೇಹಿತ ರೋಹಿತ್ ಕುಮಾರ್ ಶರ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾನೆ. ಎಚ್‌ಎಎಲ್ ಕಡೆಯಿಂದ ಸೋಮವಾರ ನಸುಕಿನಲ್ಲಿ ಈ ಗೆಳೆಯರು ಮನೆಗೆ ಮರಳುವಾಗ ಮಾರ್ಗ ಮಧ್ಯೆ ಐಟಿಪಿಎಲ್ ರಸ್ತೆಯಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತ ಅಯ್ಯಪ್ಪನ್ ಮೂಲತಃ ತಮಿಳುನಾಡಿನವನಾಗಿದ್ದು, ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಆತನ ಪೋಷಕರು ವಲಸೆ ಬಂದಿದ್ದರು. ಸಾಫ್ಟ್‌ವೇರ್ ಕಂಪನಿಯಲ್ಲಿ ಅಯ್ಯಪ್ಪನ್ ಉದ್ಯೋಗದಲ್ಲಿದ್ದ. ತನ್ನ ಸ್ನೇಹಿತನ ಜತೆ ಸೋಮವಾರ ರಾತ್ರಿ ಪಾರ್ಟಿಗೆ ಹೋಗಿದ್ದ ಆತ, ಐಟಿಪಿಎಲ್ ಮಾರ್ಗವಾಗಿ ಮನೆಗೆ ಮರಳುತ್ತಿದ್ದರು. ಆಗ ರಸ್ತೆ ಬದಿ ನಿಂತಿದ್ದ ಕಸದ ಲಾರಿಗೆ ಹಿಂದಿನಿಂದ ಸ್ಕೂಟರ್ ಡಿಕ್ಕಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಅನೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.