ಸಾರಾಂಶ
ಮೈಸೂರಿಂದ ನಂಜನಗೂಡು ಮಾರ್ಗವಾಗಿ ಚಾಮರಾಜನಗರಕ್ಕೆ ಹೋಗುತ್ತಿದ್ದ ಕಾರು ಮಂಡಕಳ್ಳಿಯ ವಿಮಾನ ನಿಲ್ದಾಣದ ಬಳಿ ಇದ್ದಕ್ಕಿದ್ದಂತೆ ರಸ್ತೆಗೆ ಅಡ್ಡಬಂದ ಹುಲಿಗೆ ಡಿಕ್ಕಿ ಹೊಡೆದಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಕಾರು ಡಿಕ್ಕಿಯಾಗಿ ಎರಡು ವರ್ಷದ ಗಂಡು ಹುಲಿ ಮೃತಪಟ್ಟಿರುವ ಘಟನೆ ಮೈಸೂರು- ನಂಜನಗೂಡು ರಸ್ತೆ ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣದ ಬಳಿ ಭಾನುವಾರ ರಾತ್ರಿ ನಡೆದಿದೆ.
ಮೈಸೂರಿಂದ ನಂಜನಗೂಡು ಮಾರ್ಗವಾಗಿ ಚಾಮರಾಜನಗರಕ್ಕೆ ಹೋಗುತ್ತಿದ್ದ ಕಾರು ಮಂಡಕಳ್ಳಿಯ ವಿಮಾನ ನಿಲ್ದಾಣದ ಬಳಿ ಇದ್ದಕ್ಕಿದ್ದಂತೆ ರಸ್ತೆಗೆ ಅಡ್ಡಬಂದ ಹುಲಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ರಸ್ತೆಯ ಪಕ್ಕದ ಪೊದೆಗೆ ಹಾರಿ ಬಿದ್ದ ಹುಲಿ ಕೆಲಕಾಲ ನೋವಿನಿಂದ ನರಳಾಡಿ ಮೃತಪಟ್ಟಿದೆ.
ನಂಜನಗೂಡು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಹುಲಿಯು ರಸ್ತೆ ದಾಟಲು ಮುಂದಾಗಿದೆ. ಈ ವೇಳೆ ನಂಜನಗೂಡಿನಿಂದ ಮೈಸೂರಿಗೆ ಬರುವ ಪಥವನ್ನು ಸುರಕ್ಷಿತವಾಗಿ ದಾಟಿರುವ ಹುಲಿ, ಮತ್ತೊಂದು ಪಥ ದಾಟುವ ವೇಳೆ ಕಾರಿಗೆ ಸಿಕ್ಕಿಕೊಂಡಿದೆ.
ಈ ಅಪಘಾತದ ನಂತರ ಕೆಲಕಾಲ ಜೀವಂತವಾಗಿದ್ದ ಹುಲಿ ಚೀರಾಡಿದೆ. ಹುಲಿ ರಸ್ತೆ ಬದಿಗೆ ಹಾರಿ ಬಿದ್ದಿದ್ದನ್ನು ಗಮನಿಸಿದ ಇತರೆ ವಾಹನಗಳ ಪ್ರಯಾಣಿಕರು ಹುಲಿ ಬಳಿ ಹೋಗಿ ನೋಡಿದಾಗ ಅದು ಒದ್ದಾಡುತ್ತಿದ್ದದ್ದು ಕಂಡು, ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಹುಲಿಗೆ ಡಿಕ್ಕಿಯಾದ ಕಾರಿನ ಮುಂಭಾಗವು ಹಾನಿಯಾಗಿದೆ. ಕಾರಿನೊಳಗೆ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಒಳಗಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಅಪಘಾತ ನಂತರ ಕಾರು ಚಾಲಕ ಸೇರಿದಂತೆ ಕಾರಿನಲ್ಲಿದ್ದ ಪ್ರಯಾಣಿಕರು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಕಾರು ವಶ, ಪ್ರಕರಣ ದಾಖಲು:
ಅಪಘಾತಕ್ಕೆ ಒಳಗಾದ ಕಾರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು, ಕಾರಿನ ಮಾಲೀಕರ ಗುರುತು ಪತ್ತೆಹಚ್ಚಿದ್ದು, ಚಾಮರಾಜನಗರದ ಮೂಲದ ಮಹಿಳೆಯೊಬ್ಬರ ಹೆಸರಿನಲ್ಲಿ ಕಾರು ನೋಂದಣಿಯಾಗಿದೆ. ಅಲ್ಲದೆ, ಅದು ಟ್ಯಾಕ್ಸಿ ಆಗಿದ್ದರಿಂದ ಆ ಕಾರನ್ನು ಯಾರು ಚಾಲನೆ ಮಾಡುತ್ತಿದ್ದರು ಎಂದು ಪತ್ತೆ ಮಾಡಲು ತನಿಖೆ ಆರಂಭಿಸಿದ್ದಾರೆ.
ಮರಣೋತ್ತರ ಪರೀಕ್ಷೆ:
ಅಪಘಾತದಲ್ಲಿ ಮೃತಪಟ್ಟ ಹುಲಿ ಕಳೆಬರವನ್ನು ಮೈಸೂರಿನ ಕೂರ್ಗಳ್ಳಿಯಲ್ಲಿರುವ ಮೃಗಾಲಯ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿ, ಸೋಮವಾರ ಮಧ್ಯಾಹ್ನ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಾನುಸಾರ ಬಂಡೀಪುರದ ಪಶುವೈದ್ಯ ಡಾ. ಮಿರ್ಜಾ ವಾಸಿಂ, ಮೈಸೂರು ಪಶುವೈದ್ಯ ಡಾ. ಮುಜೀಬ್ ರೆಹಮಾನ್ ಅವರಿಂದ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಎಸ್ಓಪಿಯಂತೆ ಮೃತದೇಹವನ್ನು ಅಂತ್ಯಕ್ರಿಯೆ ನಡೆಸಲಾಯಿತು.
ಈ ವೇಳೆ ಮೈಸೂರು ವೃತ್ತದ ಸಿಎಫ್ ಡಾ. ಮಾಲತಿ ಪ್ರಿಯಾ, ಎಸಿಎಫ್ ಲಕ್ಷ್ಮೀಕಾಂತ್, ಆರ್ಎಫ್ಓ ಕೆ. ಸುರೇಂದ್ರ. ಎನ್ ಟಿಸಿಎ ಪ್ರತಿನಿಧಿ ಕೃತಿಕಾ ಆಲನಹಳ್ಳಿ ಮೊದಲಾದವರು ಇದ್ದರು.
ಕ್ಯಾಮೆರಾ ಟ್ರಾಪ್‌ಗೆ ಸೆರೆ ಸಿಕ್ಕಿತ್ತು
ಮೈಸೂರು ಮತ್ತು ನಂಜನಗೂಡು ತಾಲೂಕು ಸುತ್ತಮುತ್ತ ಕಳೆದ ಎರಡು ತಿಂಗಳಿಂದ ನೆಲೆ ಕಂಡುಕೊಳ್ಳಲು 2 ವರ್ಷದ ನಾಲ್ಕು ಹುಲಿಗಳು ಸಂಚರಿಸುತ್ತಿದ್ದವು. ಅವುಗಳಲ್ಲಿ ಏಕೈಕ ಗಂಡು ಹುಲಿ ಕಾರು ಅಪಘಾತದಲ್ಲಿ ಮೃತಪಟ್ಟಿದೆ.
ಮೈಸೂರು ವಿಭಾಗದ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಚಿಕ್ಕನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಹೆಣ್ಣು ಹುಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಅದರಲ್ಲಿ ಮೂರು ಹೆಣ್ಣು, ಒಂದು ಗಂಡು ಮರಿಯಾಗಿತ್ತು. ಈ ಹುಲಿ ಚಿಕ್ಕನಹಳ್ಳಿ ಸೇರಿದಂತೆ ಕೆಲವೆಡೆ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾ ಟ್ರಾಪ್ ಗೆ ಸೆರೆ ಸಿಕ್ಕಿತ್ತು. ಕಾರು ಅಪಘಾತದಲ್ಲಿ ಮೃತಪಟ್ಟಿದ್ದು ಅದೇ ಗಂಡು ಹುಲಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.