ಆನೇಕಲ್ ಗ್ಯಾಂಗ್ ವಾರ್ : ಪೊಲೀಸರಿಗೆ ಚಾಕುವಿನಿಂದ ಇರಿದ ವಾಂಟೆಡ್ ಪಾತಕಿ ಕಾಲಿಗೆ ಗುಂಡೇಟು

| Published : Dec 17 2024, 01:47 AM IST / Updated: Dec 17 2024, 04:13 AM IST

Crime News

ಸಾರಾಂಶ

ಆನೇಕಲ್ ನಲ್ಲಿ ಕೆಲ ದಿನಗಳ ಹಿಂದೆ ಗ್ಯಾಂಗ್ ವಾರ್ ದಾಳಿ ನಡೆಸಿ ಜನರಲ್ಲಿ ಭೀತಿ ಮೂಡಿಸಿದ್ದ ವಾಂಟೆಡ್ ಪಾತಕಿಯನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಚಾಕುವಿಂದ ಹಲ್ಲೆ ನಡೆಡಿದ್ದು, ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

  ಆನೇಕಲ್ : ಆನೇಕಲ್ ನಲ್ಲಿ ಕೆಲ ದಿನಗಳ ಹಿಂದೆ ಗ್ಯಾಂಗ್ ವಾರ್ ದಾಳಿ ನಡೆಸಿ ಜನರಲ್ಲಿ ಭೀತಿ ಮೂಡಿಸಿದ್ದ ವಾಂಟೆಡ್ ಪಾತಕಿಯನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಚಾಕುವಿಂದ ಹಲ್ಲೆ ನಡೆಡಿದ್ದು, ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.ಬೆಸ್ತಮಾನಹಳ್ಳಿ ಲೋಕೇಶ್ ಅಲಿಯಾಸ್‌ ಲೋಕಿ ಬಂಧಿತ ಕುಖ್ಯಾತ ರೌಡಿಶೀಟರ್. ಕಾರ್ಯಾಚರಣೆ ವೇಳೆ ಚಾಕು ಲೋಕಿ ಮಾಡಿದ ಕ್ರೈಂ ಪೊಲೀಸ್ ಚನ್ನಬಸವ ನಾಯಕ್ ಗಾಯಗೊಂಡಿದ್ದು, ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಮಾಯಸಂದ್ರದ ನಿರ್ಮಾಣ ಹಂತದ ಸೇತುವೆ ಕೆಳಗೆ ಸೋಮವಾರ ಪಾತಕಿ ಲೋಕಿ ಅಡಗಿ ಕುಳಿತಿರುವ ಖಚಿತ ಮಾಹಿತಿ ಮೇರೆಗೆ ಬೆಳ್ಳಂಬೆಳಗ್ಗೆ ಕಾರ್ಯಾಚರಣೆಗೆ ಇಳಿದ ಪೊಲೀಸರ ತಂಡ ರೌಂಡ್ ಅಪ್ ಮಾಡಿದೆ. ಆಗ ಜಿಗಣಿ ಇನ್ಸ್‌ಪೇಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ತಿಳಿಸಿದರು. ಇದಕ್ಕೆ ಒಪ್ಪದ ಲೋಕಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಹಿಡಿಯಲು ಹೋದ ಕ್ರೈಂ ಪೊಲೀಸ್ ಮೇಲೆ ತನ್ನಲ್ಲಿದ್ದ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕೂಡಲೇ ಬನ್ನೇರುಘಟ್ಟ ಇನ್ಸ್‌ಪೇಕ್ಟರ್ ಸಿದ್ದನಗೌಡವ ಅವರು ಪಾತಕಿ ಕಾಲಿಗೆ ಗುಂಡು ಹಾರಿಸಿ ಸಿಬ್ಬಂದಿಯನ್ನು ರಕ್ಷಿಸುವುದರ ಜತೆಗೆ ಲೋಕಿಯನ್ನು ವಶಕ್ಕೆ ಪಡೆದಿದ್ದಾರೆ.

2 ಗುಂಪುಗಳ ಗ್ಯಾಂಗ್ ವಾರ್: ಕಳೆದ ಕೆಲ ದಿನಗಳ ಹಿಂದೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಮನು ಅಲಿಯಾಸ್ ಮನೋಜ್ ಆ್ಯಂಡ್ ಗ್ಯಾಂಗ್ ಮೇಲೆ ಲೋಕಿ ಆ್ಯಂಡ್ ಗ್ಯಾಂಗ್ ದಾಳಿ ಮಾಡಿತ್ತು. ತನ್ನ ಗುರು ಸುನೀಲ್ ಕೊಲೆಗೆ ಪ್ರತೀಕಾರವಾಗಿ ರೌಡಿಶೀಟರ್ ಮನು ಕೊಲೆಗೆ ಸ್ಕೆಚ್ ಹಾಕಿದಾಗ ಕೂದಲೆಳೆ ಅಂತರದಲ್ಲಿ ಮಿಸ್ ಆಗಿತ್ತು. ಟಾರ್ಗೆಟ್ ಮಿಸ್ ಆಗುತ್ತಿದ್ದಂತೆ ಲೋಕಿ ಗ್ಯಾಂಗ್ ಎಸ್ಕೇಪ್ ಆಗಿ ತಲೆ ಮರೆಸಿಕೊಂಡಿದ್ದರು. ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದ ಜಿಗಣಿ ಪೊಲೀಸರು, ಆರೋಪಿಗಳ ಪತ್ತೆಗೆ ಡಿವೈಎಸ್ಪಿ ಮೋಹನ್ ಅವರ ನೇತೃತ್ವದಲ್ಲಿ ತಂಡ ರಚಿಸಿತ್ತು. ಈಗ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಯಾವೊಬ್ಬ ದುರುಳನನ್ನೂ ಬಿಡುವುದಿಲ್ಲ. ಸನ್ಮಾರ್ಗದಲ್ಲಿ ನಡೆದರೆ ಭವಿಷ್ಯವಿದೆ. ಗ್ಯಾಂಗ್‌ನ ಇತರ ಸದಸ್ಯರ ಮೇಲೂ ನಿಗಾ ಇರಿಸಿದ್ದು, ಸದ್ಯದಲ್ಲೇ ಬಂಧಿಸಲಾಗುವುದು. ಇನ್ನೊಬ್ಬ ಪಾತಕಿ ಮನೋಜ್ ಮೇಲೆಯೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.

- ನಾಗೇಶ್ ಕುಮಾರ್, ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್ಪಿ