ಸಾರಾಂಶ
ಬೆಂಗಳೂರು : ನಗರದಲ್ಲಿ ಭೀಕರವಾಗಿ ಹತ್ಯೆಯಾದ ಮಹಿಳೆ ಮಹಾಲಕ್ಷ್ಮಿ 8 ತಿಂಗಳ ಹಿಂದೆ ಪತಿಯನ್ನು ತೊರೆದಿದ್ದರು ಎಂದು ತಿಳಿದುಬಂದಿದೆ.
ಕೊಲೆಯಾದ ಜಾರ್ಖಂಡ್ ಮೂಲದ ಮಹಾಲಕ್ಷ್ಮಿ ಪೋಷಕರು ಹಲವು ವರ್ಷಗಳಿಂದ ನೆಲಮಂಗಲದಲ್ಲಿ ನೆಲೆಸಿದ್ದಾರೆ. ಐದು ವರ್ಷದ ಹಿಂದೆ ತ್ರಿಪುರ ಮೂಲದ ಹಿಮಾನ್ ದಾಸ್ ಜತೆಗೆ ಮಹಾಲಕ್ಷ್ಮಿ ಮದುವೆಯಾಗಿದ್ದು, ದಂಪತಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಹಿಮಾನ್ ದಾಸ್ ನೆಲಮಂಗಲದಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಾನೆ. ದಾಂಪತ್ಯ ಕಲಹದಿಂದ ಕಳೆದ ಎಂಟು ತಿಂಗಳ ಹಿಂದೆ ಪತಿಯನ್ನು ತೊರೆದಿದ್ದಳು. ಮಗು ತಂದೆ ಹಿಮಾನ್ ದಾಸ್ ಜತೆಗೆ ಇತ್ತು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಸೇಲ್ಸ್ ಗರ್ಲ್ ಕೆಲಸ:
ಕೊಲೆಯಾದ ಮಹಾಲಕ್ಷ್ಮಿ ನಗರದ ಮಾಲ್ವೊಂದರಲ್ಲಿ ಸೇಲ್ಸ್ ಗರ್ಲ್ ಕೆಲಸ ಮಾಡುತ್ತಿದ್ದಳು. ಕಳೆದ ಮೂರು ತಿಂಗಳಿಂದ ವೈಯಾಲಿ ಕಾವಲ್‌ನ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದಳು. ಬೆಳಗ್ಗೆ ಮನೆಯಿಂದ ಹೋದರೆ ಮತ್ತೆ ಸಂಜೆ ಮನೆಗೆ ಬರುತ್ತಿದ್ದಳು. ಸ್ಥಳೀಯರ ಜತೆಗೆ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಓರ್ವ ನಿತ್ಯ ಪಿಕಪ್-ಡ್ರಾಪ್ ಮಾಡ್ತಿದ್ದ!
ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ಮಹಾಲಕ್ಷ್ಮಿ ನಿತ್ಯ ಕೆಲಸಕ್ಕೆ ಹೋಗುವಾಗ ಯುವಕನೊಬ್ಬ ಬೆಳಗ್ಗೆ ಮನೆ ಬಳಿ ಬಂದು ಪಿಕಾಪ್ ಮಾಡುತ್ತಿದ್ದ. ಸಂಜೆ ಮತ್ತೆ ಮನೆ ಬಳಿಗೆ ಆಕೆಯನ್ನು ಡ್ರಾಪ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈಗ ಮಹಾಲಕ್ಷ್ಮಿ ಕೊಲೆ ಆಗಿರುವುದರಿಂದ ಆ ಯುವಕನ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು ಪಿಕಾಪ್-ಡ್ರಾಪ್ ಮಾಡುತ್ತಿದ್ದ ಆ ಯುವಕನ ಪತ್ತೆಗಾಗಿ ಶೋಧಿಸುತ್ತಿದ್ದಾರೆ.
ಸೆ.12ಕ್ಕೆ ಮೊಬೈಲ್ ಸ್ವಿಚ್ಡ್ ಆಫ್
ಕೊಲೆಯಾದ ಮಹಾಲಕ್ಷ್ಮಿ ಬಳಸುತ್ತಿದ್ದ ಮೊಬೈಲ್ ಫೋನ್ ಕೊನೆಯದಾಗಿ ಸೆ.12ರ ಸಂಜೆ ಸ್ವಿಚ್ಡ್ ಆಫ್ ಆಗಿದೆ. ಹಂತಕ ಅಂದೇ ಮಹಾಲಕ್ಷ್ಮಿಯನ್ನು ಕೊಲೆಗೈದು ಬಳಿಕ ಮೃತದೇಹವನ್ನು ತುಂಡು ಮಾಡಿ 165 ಲೀಟರ್ ಸಾಮರ್ಥ್ಯದ ಫ್ರಿಡ್ಜ್ಗೆ ತುಂಬಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಈಗಾಗಲೇ ಪೊಲೀಸರು ಮಹಾಲಕ್ಷ್ಮಿಯ ಮೊಬೈಲ್ ಸಂಖ್ಯೆಯ ಸಿಡಿಆರ್ ತೆಗೆದು ಕರೆಗಳ ವಿವರ ಪರಿಶೀಲಿಸುತ್ತಿದ್ದಾರೆ.
ಹಂತಕರ ಪತ್ತೆಗೆ 6 ವಿಶೇಷ ತಂಡ
ಮಹಿಳೆಯ ಮೃತದೇಹ ಕತ್ತರಿಸಿ ತುಂಡುಗಳನ್ನು ಫ್ರಿಡ್ಜ್ನಲ್ಲಿ ತುಂಬಲಾಗಿದೆ. ಕೊಲೆಯಾದ ಮಹಿಳೆ ಹೊರರಾಜ್ಯದವರು ಎಂದು ತಿಳಿದು ಬಂದಿದೆ. ಘಟನಾ ಸ್ಥಳ ನೋಡಿದರೆ ನಾಲ್ಕೈದು ದಿನಗಳ ಹಿಂದೆಯೇ ಈ ಕೊಲೆ ನಡೆದಿರುವ ಸಾಧ್ಯತೆಯಿದೆ. ಈಗಾಗಲೇ ಪೊಲೀಸ್ ಶ್ವಾನದಳ, ಎಫ್ಎಸ್ಎಲ್ ತಂಡ, ಬೆರಳಚ್ಚು ತಜ್ಞರ ತಂಡ ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸುತ್ತಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರ ಆರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ತಿಳಿಸಿದ್ದಾರೆ.
ಕೆ.ಆರ್.ಪುರದಲ್ಲಿ ವೃದ್ಧೆಯ ಕೊಂದು ಡ್ರಮ್ಗೆ ತುಂಬಿದ್ದ
ಕಳೆದ ಫೆಬ್ರವರಿ 24ರಂದು ಕೆ.ಆರ್.ಪುರದ ನಿಸರ್ಗ ಲೇಔಟ್ ನಿವಾಸಿ ಸುಶೀಲಮ್ಮ(70) ಎಂಬಾಕೆಯ ಕೊಲೆಯಾಗಿತ್ತು. ಚಿನ್ನಾಭರಣ ದೋಚುವ ಉದ್ದೇಶದಿಂದ ಪರಿಚಿತ ದಿನೇಶ್ ಎಂಬಾತ ಸುಶೀಲಮ್ಮನನ್ನು ದೇವಸ್ಥಾನಕ್ಕೆ ಕರೆದೊಯ್ಯುವುದಾಗಿ ತನ್ನ ಮನೆಗೆ ಕರೆಸಿಕೊಂಡು ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಬಳಿಕ ಆಕೆಯ ಮೈ ಮೇಲಿದ್ದ ಚಿನ್ನಾಭರಣ ದೋಚಿದ್ದ. ನಂತರ ಮೃತದೇಹವನ್ನು ಐದು ತುಂಡು ಮಾಡಿ ಡ್ರಮ್ಗೆ ತುಂಬಿದ್ದ. ಡ್ರಮ್ ವಿಲೇವಾರಿ ಮಾಡಲಾಗದೆ ಸುಶೀಲಮ್ಮನ ಕೈ-ಕಾಲುಗಳನ್ನು ವೆಂಕಯ್ಯನ ಕೆರೆಗೆ ಎಸೆದಿದ್ದ. ಬಳಿಕ ಕೆ.ಆರ್.ಪುರ ಠಾಣೆ ಪೊಲೀಸರು ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸಿದ್ದರು.
ಬೆಚ್ಚಿಬಿದ್ದ ರಾಜಧಾನಿ ಜನ
ವೈಯಾಲಿಕಾವಲ್‌ನಲ್ಲಿ ಒಂಟಿ ಮಹಿಳೆಯ ಭಯಭೀಕರ ಕೊಲೆ ಘಟನೆಗೆ ರಾಜಧಾನಿ ಜನ ಬೆಚ್ಚಿ ಬಿದ್ದಿದ್ದಾರೆ. ಮಹಿಳೆಯ ಭೀಬತ್ಸ ಕೊಲೆ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಭಾರೀ ಸಂಖ್ಯೆ ಜನರು ಮನೆ ಬಳಿ ಜಮಾಯಿಸಿದ್ದರು. ಸ್ಥಳೀಯರು ಈ ಘನಘೋರ ಘಟನೆಯಿಂದ ಹೌಹಾರಿದ್ದರು.
ಕೊಲೆ ಹಿನ್ನೆಲೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಬೆರಳಚ್ಚು ತಜ್ಞರು, ಶ್ವಾನ ದಳ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ತಪಾಸಣೆ ಹಾಗೂ ತನಿಖೆಗೆ ತೊಂದರೆಯಾಗದಂತೆ ಮನೆ ಬಳಿ ಗುಂಪು ಗೂಡಿದ್ದ ಜನರನ್ನು ಪೊಲೀಸರು ದೂರಕ್ಕೆ ಕಳುಹಿಸಿದರು. ಪೊಲೀಸರ ಮಹಜರು ಪ್ರಕ್ರಿಯೆ ಹಾಗೂ ತನಿಖೆಯನ್ನು ಜನ ಆತಂಕದ ನಡುವೆಯೂ ಕುತೂಲಹದಿಂದ ವೀಕ್ಷಿಸುತ್ತಿದ್ದರು. ಇನ್ನು ಮನೆ ಬಳಿಗೆ ಪೊಲೀಸರು ಬಂದು ಹೋಗುತ್ತಿದ್ದರಿಂದ ನೆರೆಹೊರೆಯವರು ತಮ್ಮ ಮನೆಗಳಿಗೆ ಬೀಗ ಹಾಕಿಕೊಂಡು ಒಬ್ಬೊಬ್ಬರೇ ಹೊರಡುತ್ತಿದ್ದ ದೃಶ್ಯಗಳು ಕಂಡು ಬಂದಿತು.