ಸಾರಾಂಶ
ಬೆಂಗಳೂರು: ತಲೆಗೆ ಚೂಡಿದಾರದ ದುಪ್ಪಟ್ಟ ಕಟ್ಟಿಕೊಂಡು ಅದರಲ್ಲಿ ಮೊಬೈಲ್ ಸಿಕ್ಕಿಸಿ ಮಾತನಾಡುತ್ತ ಸ್ಕೂಟರ್ ಓಡಿಸಿದ ತಪ್ಪಿಗೆ ಕೂಲಿ ಕಾರ್ಮಿಕ ಮಹಿಳೆಯೊಬ್ಬರು 5 ಸಾವಿರ ರು. ದಂಡ ತೆತ್ತಿದ್ದಾರೆ..!
ವಿದ್ಯಾರಣ್ಯಪುರದ ನಿವಾಸಿಯಾದ ಮಹಿಳೆ ಈ ದಂಡ ಭರಿಸಿದ್ದು, ಸಂಚಾರ ನಿಯಮ ಉಲ್ಲಂಘಿಸಿದ ಆಕೆಯಿಂದ ಯಲಹಂಕ ಸಂಚಾರ ಠಾಣೆ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ಆಕ್ಟಿವಾ ಹೊಂಡಾದಲ್ಲಿ ತಲೆಗೆ ಚೂಡಿದಾರದ ದುಪ್ಪಟ್ಟ ಕಟ್ಟಿಕೊಂಡು ಅದರಲ್ಲಿ ಮೊಬೈಲ್‌ನಲ್ಲಿ ಸಿಕ್ಕಿಸಿ ಸ್ಕೂಟರ್ ಓಡಿಸಿಕೊಂಡು ಮಾತನಾಡುತ್ತ ಹೋಗುವ ದೃಶ್ಯವನ್ನು ಸಾರ್ವಜನಿಕರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಆಪ್‌ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ಈ ಸಂಚಾರ ನಿಯಮ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದ ಯಲಹಂಕ ಸಂಚಾರ ಠಾಣೆ ಪೊಲೀಸರು, ಕೊನೆಗೆ ವಾಹನದ ನೋಂದಣಿ ಸಂಖ್ಯೆ ಆಧರಿಸಿ ಪತ್ತೆ ಹಚ್ಚಿದ್ದಾರೆ. ಬಳಿಕ ವಿಚಾರಿಸಿದಾಗ ಆಕೆ ಚಾಲನಾ ಪರವಾನಿಗೆ ಸಹ ಹೊಂದಿಲ್ಲದ ಸಂಗತಿ ಗೊತ್ತಾಗಿದೆ. ಈಗ ಚಾಲನಾ ಪರವಾನಿಗೆ ಇಲ್ಲ (ಡಿಎಲ್)ದ ಒಂದು ಸಾವಿರ ರು, ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ 500 ರು, ವಾಹನ ಚಾಲನೆ ವೇಳೆ ಮೊಬೈಲ್‌ನಲ್ಲಿ ಸಂಭಾಷಣೆಗೆ ಎರಡು ಸಾವಿರ ರು, ಅಜಾಗರೂಕ ಚಾಲನೆಗೆ ಒಂದು ಸಾವಿರ ರು ಸೇರಿ ಒಟ್ಟು 5 ಸಾವಿರ ರು ದಂಡ ವಿಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.