ಬೆಂಗಳೂರು : ಕೆ.ಆರ್‌.ಮಾರ್ಕೆಟ್‌ನಲ್ಲಿ ಬಸ್‌ಗೆ ಕಾಯುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಸುಲಿಗೆ

| Published : Jan 21 2025, 01:31 AM IST / Updated: Jan 21 2025, 04:32 AM IST

ಸಾರಾಂಶ

ಬಸ್‌ ಬಗ್ಗೆ ವಿಚಾರಿಸಿದ ಮಹಿಳೆಯನ್ನು ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ಘಟನೆ ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆಯಲ್ಲಿ ನಡೆದಿದೆ.

 ಬೆಂಗಳೂರು : ಕೆ.ಆರ್‌.ಮಾರ್ಕೆಟ್‌ನಲ್ಲಿ ಬಸ್‌ಗಾಗಿ ಕಾಯುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಬಸ್‌ ತೋರಿಸುವುದಾಗಿ ಕರೆದೊಯ್ದು ಅತ್ಯಾಚಾರ ಎಸೆಗಿ ಮೊಬೈಲ್‌, ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಕೇಂದ್ರ ವಿಭಾಗದ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಭಾನುವಾರ ರಾತ್ರಿ ಸುಮಾರು 11.30ಕ್ಕೆ ಕೆ.ಆರ್‌.ಮಾರ್ಕೆಟ್‌ ಬಳಿಯ ಗೋಡೌನ್‌ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಸಂಬಂಧ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಯಲಹಂಕಕ್ಕೆ ತೆರಳಲು ಮಹಿಳೆ ಭಾನುವಾರ ರಾತ್ರಿ ಕೆ.ಆರ್.ಮಾರ್ಕೆಟ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಇಬ್ಬರು ಅಪರಿಚಿತರು ಅಲ್ಲಿಗೆ ಬಂದಿದ್ದಾರೆ. ಆಗ ಮಹಿಳೆಯು ಬಸ್‌ ಬಗ್ಗೆ ವಿಚಾರಿಸಿದ್ದಾರೆ. ಬಸ್‌ ತೋರಿಸುವುದಾಗಿ ಮಹಿಳೆಯನ್ನು ಗೋಡೌನ್‌ ಸ್ಟ್ರೀಟ್‌ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಬಳಿಕ ಮಹಿಳೆಯನ್ನು ಬೆದರಿಸಿ ಮೊಬೈಲ್, ಹಣ, ಚಿನ್ನಾಭರಣ ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.