ದಾಸರಹಳ್ಳಿ : ₹3500 ವಾಪಸ್‌ ಕೊಡದ ಯುವಕನನ್ನು ಅಪಹರಿಸಿ, ಮನೇಲಿ ಕೂಡಿಟ್ಟು ಹತ್ಯೆ

| Published : Dec 06 2024, 04:58 AM IST

Crime

ಸಾರಾಂಶ

ಚಿಲ್ಲರೆ ಕಾಸಿಗಾಗಿ ಯುವಕನನ್ನು ಅಪಹರಿಸಿ, ಕೊಲೆ ಮಾಡಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ದಾಸರಹಳ್ಳಿ : ಚಿಲ್ಲರೆ ಕಾಸಿಗಾಗಿ ಯುವಕನನ್ನು ಅಪಹರಿಸಿ, ಕೊಲೆ ಮಾಡಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ನಲವತ್ತು ದಿನಗಳ ಬಳಿಕ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಖಿಲೇಶ್ ಯಾದವ್ (24)​ ಕೊಲೆಯಾದ ಯುವಕ. ಮಾಚೋಹಳ್ಳಿಯ ಮಹಮ್ಮದ್ ಏಸನ್(23), ತಿಗಳರಪಾಳ್ಯದ ರೋಷನ್ ಜಮೀರ್(23), ಗಣೇಶ್ (24), ನಂದಕುಮಾರ್(20), ಹೆಸರಘಟ್ಟದ ವಿಶ್ವ(24), ಯಲಹಂಕದ ನಾಗೇಶ್ (30), ಮನುಕುಮಾರ್(26) ಮತ್ತು 17 ವರ್ಷದ ಅಪ್ರಾಪ್ತ ಬಂಧಿತರು.

ಮೂರೂವರೆ ಸಾವಿರ ಸಾಲ: ಚಿಲ್ಲರೆ ಕಾಸಿನಗಾಗಿ ಈ ಎಂಟು ಜನ ಅಖಿಲೇಶ್‌ನನ್ನು ಅಪಹರಿಸಿ ಮನೆಯೊಂದರಲ್ಲಿ ಕೊಲೆ ಮಾಡಿದ್ದಾರೆ. ಯಾರಿಗೂ ಗೊತ್ತಾಗಬಾರದು ಅಂತ ನೂರಾರು ‌ಕಿಲೋಮೀಟರ್‌ ದೂರದಲ್ಲಿರುವ ಅರಣ್ಯ ಪ್ರದೇಶದಲ್ಲಿ ಶವವನ್ನು ‌ಬಿಸಾಡಿ ಹೋಗಿದ್ದರು. ಬಿಹಾರ‌ ಮೂಲದ ಅಖಿಲೇಶ್‌ ನೆಲಮಂಗಲದ ಖಾಸಗಿ‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಾಚೋಹಳ್ಳಿಯ ಮಹಮ್ಮದ್ ಏಸನ್ ಬಳಿ ಕೇವಲ‌ ಮೂರೂವರೆ ಸಾವಿರ ಸಾಲ ಪಡೆದುಕೊಂಡಿದ್ದ. ವಾಪಸ್‌ ನೀಡಲು ಮತ್ತಷ್ಟು ಸಮಯ ಕೇಳಿದ್ದ.

ಇಷ್ಟಕ್ಕೆ ಕೋಪಗೊಂಡ ಆರೋಪಿ ಏಸನ್ ತನ್ನ ಸಹಚರರೊಂದಿಗೆ ಸೇರಿ ಅಖಿಲೇಶ್‌ ಅಪಹರಿಸಿ, ಹಣ ವಸೂಲಿಗೆ ಯೋಜಿಸಿದ್ದ. ಅದರಂತೆ ಅಕ್ಟೋಬರ್ 19ರ ಸಂಜೆ ಕಾಚೋಹಳ್ಳಿಯ ಬಳಿ ಆರೋಪಿಗಳು ಅಖಿಲೇಶ್​ನನ್ನು ಕಾರ್​ನಲ್ಲಿ ಅಪಹರಿಸಿದ್ದರು. ನಂತರ ರಾಮಗೊಂಡಹಳ್ಳಿಯ ಆರೋಪಿಯೊಬ್ಬನ ಮನೆಗೆ ಕರೆತಂದು‌ ಕೊಲೆ ಮಾಡಿದ್ದಾರೆ. ಯಾವುದೇ ಸುಳಿವು ಸಿಗಬಾರದು‌‌ ಎಂದು ‌ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಳಿಯ ಬನವಿಕಲ್ ಅರಣ್ಯ ಪ್ರದೇಶದಲ್ಲಿ ಶವ ಎಸೆದು ವಾಪಸ್‌ ಆಗಿದ್ದರು. ಎಲ್ಲವೂ ಅಂದುಕೊಂಡಂತೆ‌‌ ಆಗಿದೆ ಎಂದು ನೆಮ್ಮದಿಯ ಬಿಟ್ಟುಸಿರು ಬಿಟ್ಟು‌ ಎಂದಿನಂತೆ ತಮ್ಮ ಕೆಲಸದಲ್ಲಿ ಆರೋಪಿಗಳು ತೊಡಗಿದ್ದರು.

ಫೋನ್ ಕಾಲ್ ಸಿಡಿಆರ್ ಸುಳಿವು

ಅಕ್ಟೋಬರ್ 23ರಂದು ಕುರಿಗಾಹಿಗಳಿಗೆ ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವ ನೋಡಿ ಕೂಡಲೇ ವಿಜಯನಗರದ ಹೊಸಹಳ್ಳಿ ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ. ಮೃತ ಶವದ ಬಗ್ಗೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಅಕ್ಟೋಬರ್ 26ರಂದು ಪೊಲೀಸರೇ ಅಂತ್ಯಕ್ರಿಯೆ ನಡೆಸಿದ್ದಾರೆ. ಇತ್ತ ಅಕ್ಟೋಬರ್ 21ರಂದು ಅಖಿಲೇಶ್ ಪೋಷಕರು ತಮ್ಮ ಮಗ ನಾಪತ್ತೆ ಆಗಿರುವುದಾಗಿ ಮಾದನಾಯಕನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಫೋನ್ ಕಾಲ್‌ನ ಸಿಡಿಆರ್‌ನಲ್ಲಿ ಆರೋಪಿಗಳ ಸುಳಿವು ಸಿಕ್ಕಿದೆ.

8 ಆರೋಪಿಗಳು ಅಪಹರಣ, ಕೊಲೆ, ಶವ ಸಾಗಣೆಯಲ್ಲಿ ಭಾಗಿಯಾಗಿರುವ ವಿಚಾರ ತನಿಖೆಯಲ್ಲಿ ಖಚಿತವಾಗಿದೆ. ಇನ್ನು ಕೊಳೆತ ಸ್ಥಿತಿಯಲ್ಲಿ ಸಿಕ್ಕ ಶವದ ಬಲಗೈನಲ್ಲಿ ಟ್ಯಾಟೂ‌ ನೋಡಿದ ಕುಟುಂಬಸ್ಥರು ಅಖಿಲೇಶ್ ಚಹರೆ ಪತ್ತೆ ಹಚ್ಚಿದ್ದಾರೆ. ಗೂಳಿ ಟ್ಯಾಟೂ ನೋಡಿದ ಬಳಿಕ ಅಖಿಲೇಶ್ ಸಾವು ಖಚಿತ ಪಡಿಸಿ, ಕೊಲೆಯ ಆರೋಪಿಗಳ ತಂತ್ರವನ್ನು ಪೊಲೀಸರು ಭೇದಿಸಿದ್ದಾರೆ.