ಸಾರಾಂಶ
ಹುಬ್ಬಳ್ಳಿ: ಯುವಕನೋರ್ವನನ್ನು ಕೊಲೆ ಮಾಡಿ ಬಳಿಕ ಶವಕ್ಕೆ ಬೆಂಕಿ ಹಚ್ಚಿದ ಘಟನೆ ಕಾರವಾರ ರಸ್ತೆಯ ಎಂಟಿಎಸ್ ಕಾಲನಿಯಲ್ಲಿ ನಡೆದಿದೆ.
ಇಲ್ಲಿನ ಹೆಗ್ಗೇರಿಯ ಮಾರುತಿ ನಗರದ ನಿವಾಸಿ ವಿಜಯ ಬಸವ (24) ಕೊಲೆಯಾದ ಯುವಕನಾಗಿದ್ದು, ಕಾರವಾರ ರಸ್ತೆಯ ಎಂಟಿಎಸ್ ಕಾಲನಿಯ ಪಾಳುಬಿದ್ದ ಜಾಗದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಬುಧವಾರ ಬೆಳಗ್ಗೆ ದೇಹ ಪತ್ತೆಯಾಗಿದೆ. ಕೊಲೆ ಮಾಡಿ ಬೆಂಕಿ ಹಚ್ಚಿದ್ದಾರೆ. ಬೆಳಗ್ಗೆಯೇ ಕೊಲೆ ಸುದ್ದಿ ಊರೆಲ್ಲ ಹಬ್ಬಿದ ಕಾರಣ ನಗರದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.ಬಹುಶಃ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಬಳಿಕ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಖಾಸಗಿ ಟೆಲಿಫೋನ್ ಕಂಪನಿಯ ಸೇಲ್ಸ್‌ನಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದ. ಮಂಗಳವಾರ ಕೆಲಸ ಮುಗಿಸಿ ಸಂಜೆ 6ಕ್ಕೆ ಮನೆಗೆ ಬಂದು, 6.30ಕ್ಕೆ ಹೊರಗೆ ಹೋಗಿದ್ದ. ರಾತ್ರಿ 10.30ರ ವೇಳೆ ಕರೆ ಮಾಡಿ ಮಾತನಾಡಿದ್ದ. ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. 1 ಗಂಟೆಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಅವನ ಸ್ನೇಹಿತರು, ಪರಿಚಯದವರನ್ನೆಲ್ಲ ಸಂಪರ್ಕಿಸಿದರೂ ಮಾಹಿತಿ ಸಿಕ್ಕಿರಲಿಲ್ಲ'''''''' ಎಂದು ಮೃತ ವಿಜಯ ಅವರ ತಮ್ಮ ವಿಶಾಲ ತಿಳಿಸಿದ್ದಾರೆ.ಬೆಳಗ್ಗೆ ತಮ್ಮ ಸಹೋದರನನ್ನು ಹುಡುಕುತ್ತ ಚಟ್ನಿ ಕಾಂಪ್ಲೆಕ್ಸ್ ಬಳಿ ಬಂದಿದ್ದೇವು. ಅಲ್ಲಿ ಅವನ ಬೈಕ್ ಇತ್ತು. ಇಲ್ಲೇ ಎಲ್ಲೋ ಇರಬಹುದು ಎಂದು ಹುಡುಕುತ್ತಿದ್ದಾಗ, ಯಾರನ್ನೋ ಕೊಲೆ ಮಾಡಿ ಸುಟ್ಟುಹಾಕಿದ್ದಾರೆ ಎಂದು ಸಾರ್ವಜನಿಕರೊಬ್ಬರು ಹೇಳಿದರು. ಹೋಗಿ ಪರಿಶೀಲನೆ ನಡೆಸಿದಾಗ ಪಾಳುಬಿದ್ದ ಜಾಗದಲ್ಲಿ ಅಣ್ಣನ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೌಮ್ಯ ಸ್ವಭಾವದವನಾದ ಅವನು ಎಲ್ಲರ ಜೊತೆಯೂ ಪ್ರೀತಿಯಿಂದಲೇ ಇರುತ್ತಿದ್ದ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಅವನ ಮೊಬೈಲ್ ಫೋನ್ ಸಹ ಪತ್ತೆಯಾಗಿಲ್ಲ ಎಂದು ಕಣ್ಣೀರು ಸುರಿಸಿದರು.
ಮೃತ ದೇಹದ ಪಕ್ಕ ಮದ್ಯದ ಬಾಟಲಿ ಹಾಗೂ ರಕ್ತ ಅಂಟಿದ ಎರಡು ಕಲ್ಲುಗಳು ಪತ್ತೆಯಾಗಿವೆ. ಸುಟ್ಟ ದೇಹದ ಭಾಗದ ಕೆಲವೆಡೆ ನಾಯಿ ಕಚ್ಚಿದ ಗುರುತುಗಳಾಗಿವೆ. ಮುಖದ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದಿರುವ ಗುರುತುಗಳಿವೆ. ಸ್ನೇಹಿತ ರಾಘವೇಂದ್ರ ಅವರಿಗೆ ಕರೆ ಮಾಡಿ, ಏನೋ ಮಾತನಾಡಬೇಕು ಎಂದಿದ್ದರಂತೆ. ಯಾವ ಕಾರಣಕ್ಕೆ ಕೊಲೆಯಾಗಿದೆ? ಯಾರು ಮಾಡಿದ್ದು? ಎನ್ನುವ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ, ಡಿಸಿಪಿ ರಾಜೀವ್ ಎಂ., ಎಸಿಪಿ ವಿಜಯಕುಮಾರ ವಿ.ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಸಿಬ್ಬಂದಿ, ಬೆರಳಚ್ಚು ತಜ್ಞರು, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಾಹಿತಿ ಕಲೆ ಹಾಕಿದ್ದಾರೆ.
ಎಲ್ಲ ವಿಧದಲ್ಲೂ ತನಿಖೆ: ಕಮಿಷನರ್ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಕಮಿಷನರ್ ರೇಣುಕಾ ಸುಕುಮಾರ ಮಾತನಾಡಿ, ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲ ವಿಧದಲ್ಲೂ ತನಿಖೆ ನಡೆಸಲಾಗುವುದು. ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸಹ ಮಾಹಿತಿ ಸಂಗ್ರಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಹಾಗೂ ತಜ್ಞರ ಮಾಹಿತಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.