ಸಾರಾಂಶ
ಬೆಂಗಳೂರು : ಹೊಸ ವರ್ಷಾಚರಣೆ ಪ್ರಯುಕ್ತ ಪಾರ್ಟಿ ವೇಳೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಸಾವಿಗೆ ಕಾರಣರಾಗಿದ್ದ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಸೇರಿ 7 ಮಂದಿ ಆರೋಪಿಗಳನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಭುವನೇಶ್ವರಿನಗರದ ಸಾಗರ್, ದಿಲೀಪ್, ಗಂಗಾಧರ್ ಅಲಿಯಾಸ್ ಸೋಡಾ, ವಿಜಯ್, ಮಾದೇಶ್ ಅಲಿಯಾಸ್ ಮಾದಿ ಹಾಗೂ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಬಂಧಿತರು. ಆರೋಪಿಗಳು ಜ.1ರ ಮುಂಜಾನೆ ಭುವನೇಶ್ವರಿನಗರದ ಗಾಂಧಿ ಬ್ರಿಡ್ಜ್ ಬಳಿ ಸ್ನೇಹಿತನಾದ ಕುಶಾಲ್ ಅಲಿಯಾಸ್ ಘಟ್ಟ (24) ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕುಶಾಲ್ ಚಿಕಿತ್ಸೆ ಫಲಿಸದೆ ಜ.9ರ ಮುಂಜಾನೆ ಮೃತಪಟ್ಟಿದ್ದಾನೆ. ಈ ಸಂಬಂಧ ಮತನ ತಾಯಿ ಶಾಂತಮ್ಮ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?
ಆರೋಪಿಗಳು ಹಾಗೂ ಆಟೋ ಚಾಲಕನಾಗಿದ್ದ ಕುಶಾಲ್ ಸ್ನೇಹಿತರಾಗಿದ್ದರು. ಹೊಸವರ್ಷಾಚರಣೆ ಪ್ರಯುಕ್ತ ಡಿ.31ರ ರಾತ್ರಿ ಭುವನೇಶ್ವರಿನಗರದ ಗಾಂಧಿ ಬ್ರಿಡ್ಜ್ ಬಳಿ ಮದ್ಯದ ಪಾರ್ಟಿ ಮಾಡಿದ್ದಾರೆ. ಈ ವೇಳೆ ಮದ್ಯದ ನಶೆಯಲ್ಲಿ ಕುಶಾಲ್, ಆರೋಪಿಗಳ ಕೈಯಲ್ಲಿದ್ದ ಬಿಯರ್ ಬಾಟಲಿಗಳನ್ನು ಪದೇ ಪದೇ ಕಿತ್ತುಕೊಂಡು ಕಿರಿಕಿರಿ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಕುಶಾಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ರಕ್ತದ ಮಡುವಿನಲ್ಲಿ ಬಿದ್ದ ಕುಶಾಲ್‌ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ತಲೆ ಭಾಗಕ್ಕೆ ಗಂಭೀರ ಪೆಟ್ಟು ಬಿದ್ದು ಗಾಯಗೊಂಡಿದ್ದ ಕುಶಾಲ್ ಚಿಕಿತ್ಸೆ ಫಲಿಸದೆ ಜ.9ರ ಮುಂಜಾನೆ ಮೃತಪಟ್ಟಿದ್ದಾನೆ. ಈ ಸಂಬಂಧ ಮೃತನ ತಾಯಿ ಶಾಂತಮ್ಮ ನೀಡಿದ್ದ ದೂರಿನ ಮೇರೆಗೆ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.