ಕುಳಿತುಕೊಳ್ಳುವ ಚೇರಿನ ವಿಚಾರಕ್ಕೆ ಎಎಸ್ಐ ಮತ್ತು ಮುಖ್ಯ ಪೇದೆ ಠಾಣೆಯಲ್ಲೇ ಬೈದಾಡಿ, ಗಲಾಟೆ

| Published : Jul 19 2024, 02:03 AM IST / Updated: Jul 19 2024, 04:59 AM IST

ಸಾರಾಂಶ

ಕುಳಿತುಕೊಳ್ಳುವ ಚೇರಿನ ವಿಚಾರಕ್ಕೆ ಎಎಸ್ಐ ಮತ್ತು ಮುಖ್ಯ ಪೇದೆ ಠಾಣೆಯಲ್ಲೇ ಕಚ್ಚಾಡಿಕೊಂಡ ಘಟನೆ ಪುಟ್ಟೇನಹಳ್ಳಿ ಠಾಣೆಯಲ್ಲಿ ನಡೆದಿದೆ. ಇಬ್ಬರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ.

  ಬೆಂಗಳೂರು :  ತಮ್ಮ ಠಾಣೆಯಲ್ಲಿ ಕುಳಿತುಕೊಳ್ಳಲು ಕುರ್ಚಿ ವಿಚಾರವಾಗಿ ಪರಸ್ಪರ ಬೈದಾಡಿ ಗಲಾಟೆ ಮಾಡಿಕೊಂಡಿದ್ದ ಆರೋಪದ ಮೇರೆಗೆ ಪುಟ್ಟೇನಹಳ್ಳಿ ಠಾಣೆಯ ಇಬ್ಬರು ಸಿಬ್ಬಂದಿ ತಲೆದಂಡವಾಗಿದೆ.

ಪುಟ್ಟೇನಹಳ್ಳಿ ಠಾಣೆ ಸಹಾಯಕ ಸಬ್‌ ಇನ್‌ಸ್ಪೆಕ್ಟರ್ (ಎಎಸ್‌ಐ) ಮಂಜುನಾಥ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ ಅಂಜನಮೂರ್ತಿ ವಿರುದ್ಧ ಶಿಸ್ತು ಕ್ರಮವಾಗಿದ್ದು, ಎರಡು ದಿನಗಳ ಹಿಂದೆ ಠಾಣೆಯಲ್ಲಿ ಕುರ್ಚಿ ವಿಚಾರವಾಗಿ ಎಎಸ್‌ಐ ಮತ್ತು ಎಚ್‌ಸಿ ಜಗಳವಾಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಇನ್‌ಸ್ಪೆಕ್ಟರ್‌ ರವಿಕುಮಾರ್ ಅವರು, ಆಶಿಸ್ತು ತೋರಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮಕ್ಕೆ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್‌ ಜಗಲಾಸರ್‌ ಅವರಿಗೆ ವರದಿ ಸಲ್ಲಿಸಿದ್ದರು. ಈ ವರದಿ ಹಿನ್ನೆಲೆಯಲ್ಲಿ ಎಎಸ್‌ ಹಾಗೂ ಎಚ್‌ಸಿ ವಿರುದ್ಧ ಡಿಸಿಪಿ ಶಿಸ್ತು ಕ್ರಮ ಜರುಗಿಸಿದ್ದಾರೆ ಎನ್ನಲಾಗಿದೆ.

ಹಲವು ದಿನಗಳಿಂದ ಎಎಸ್‌ಐ ಮಂಜುನಾಥ್ ಹಾಗೂ ಎಚ್‌ಸಿ ಅಂಜನಮೂರ್ತಿ ಮಧ್ಯೆ ಮನಸ್ತಾಪವಿತ್ತು. ಕಳೆದ ಮಂಗಳವಾರ ಠಾಣೆಯಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳುವ ವಿಚಾರವಾಗಿ ಈ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ‘ನಾನು ಸೇವಾ ಹಿರಿತನದಲ್ಲೇ ಹಿರಿಯವನು. ನನ್ನ ಆದೇಶ ನೀನು ಪಾಲಿಸಬೇಕು’ ಎಂದು ಎಚ್‌ಸಿಗೆ ಎಎಸ್‌ಐ ಹೇಳಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಎಚ್‌ಸಿ, ‘ನಾನು ಸೇವಾ ಹಿರಿತನ ಹೊಂದಿದ್ದೇನೆ’ ಎಂದಿದ್ದಾರೆ. ಕೊನೆಗೆ ಇತರೆ ಸಿಬ್ಬಂದಿ ಮಧ್ಯೆಪ್ರವೇಶಿಸಿ ಜಗಳ ಬಿಡಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

 ಈ ಗಲಾಟೆ ನಡೆದ ಸಂದರ್ಭದಲ್ಲಿ ವಿಧಾನಸಭಾ ಅಧಿವೇಶನದ ಕರ್ತವ್ಯದಲ್ಲಿ ಇನ್‌ಸ್ಪೆಕ್ಟರ್‌ ರವಿಕುಮಾರ್ ನಿರತರಾಗಿದ್ದರು. ಠಾಣಾಧಿಕಾರಿ ಇಲ್ಲದ ವೇಳೆ ಸಿಬ್ಬಂದಿ ಗಲಾಟೆ ಮಾಡಿಕೊಂಡಿದ್ದಾರೆ.ಪೊಲೀಸರಲ್ಲಿ ಯಾವುದೇ ಕಾರಣಕ್ಕೂ ಅಶಿಸ್ತು ಸಹಿಸುವುದಿಲ್ಲ. ಠಾಣೆಯಲ್ಲಿ ಅಶಿಸ್ತು ತೋರಿರುವ ಸಿಬ್ಬಂದಿಗೆ ಕಾನೂನು ಅನುಸಾರ ಕ್ರಮವಾಗಿದೆ.

-ಲೋಕೇಶ್ ಜಗಲಾಸರ್‌, ಡಿಸಿಪಿ, ದಕ್ಷಿಣ ವಿಭಾಗ.