ಸಾರಾಂಶ
ಮದ್ದೂರು : ತಾಲೂಕಿನ ಬೋರಾಪುರ ಗೇಟ್ ಬಳಿ ಕಳೆದ ಶನಿವಾರ ಸಾರಿಗೆ ಬಸ್ ಡಿಕ್ಕಿಯಾಗಿ ಕಾರಿನ ಚಾಲಕ ಸಾಫ್ಟ್ ವೇರ್ ಎಂಜಿನಿಯರ್ ಮೃತಪಟ್ಟ ಹಿನ್ನೆಲೆಯಲ್ಲಿ ಮನನೊಂದ ಬಸ್ ಚಾಲಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಬಳಿ ಜರುಗಿದೆ.
ಸಾರಿಗೆ ಸಂಸ್ಥೆ ಮೈಸೂರು ಗ್ರಾಮಾಂತರ ವಿಭಾಗದ ಸಾತಗಳ್ಳಿ ಡಿಪೋ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಆರ್. ರಾಜೇಂದ್ರ ಮೈಸೂರು ಸಮೀಪದ ವರುಣಾ ಗ್ರಾಮದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾರಿಗೆ ಸಂಸ್ಥೆ ಮೂಲಗಳು ತಿಳಿಸಿವೆ.
ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಬಸ್ ಚಾಲಕ ರಾಜೇಂದ್ರ ಶವ ವರುಣ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಮೈಸೂರಿನ ಗಿರಿ ದರ್ಶಿನಿ ಬಡಾವಣೆಯಲ್ಲಿ ವಾಸವಾಗಿದ್ದ ರಾಜೇಂದ್ರ ಮಲೈ ಮಹದೇಶ್ವರ ಬೆಟ್ಟದ ಜಾತ್ರೆ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಕಳೆದ ಮಾ.1ರಂದು ಬೆಟ್ಟದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಮದ್ದೂರು ತಾಲೂಕಿನ ಬೋರಾಪುರ ಗೇಟ್ ಬಳಿ ಈತ ಚಾಲನೆ ಮಾಡುತ್ತಿದ್ದ ಬಸ್ ಕಾರಿಗೆ ಡಿಕ್ಕಿ ಹೊಡೆದು ಬೆಂಗಳೂರು ಎನ್‌ಟಿಡಿ ಡೇಟಾ ಕಂಪನಿ ಸಾಫ್ಟ್ ವೇರ್ ಎಂಜಿನಿಯರ್ ಮನು (37) ಮೃತಪಟ್ಟಿದ್ದರು.
ಈ ಅಪಘಾತದಿಂದ ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಚಾಲಕ ರಾಜೇಂದ್ರನ ವಿರುದ್ಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು. ಪೊಲೀಸರ ವಶದಲ್ಲಿದ್ದ ಅಪಘಾತಕೀಡಾದ ಬಸ್ಸನ್ನು ರಿಲೀಸ್ ಮಾಡಿಸಲು ತನ್ನ ಡ್ರೈವಿಂಗ್ ಲೈಸೆನ್ಸ್ ಮತ್ತು ಆಧಾರ್ ಕಾರ್ಡ್ ಸೇರಿದಂತೆ ಕೆಲವು ದಾಖಲೆ ತರಲು ಮೈಸೂರಿಗೆ ಹೊರಟಿದ್ದ ಚಾಲಕ ರಾಜೇಂದ್ರ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದರು.
ಈ ಸಂಬಂಧ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಮೈಸೂರು ಹೊರವಲಯದಲ್ಲಿ ಆರ್ಚ್ ಬಳಿ ಶನಿವಾರ ಬಸ್ಸಿನಿಂದ ಇಳಿದ ನಂತರ ವರುಣ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.