ಸಾರಾಂಶ
ಭಾರತೀನಗರ : ಕಾರು ಮತ್ತು ಗೂಡ್ಸ್ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 28ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಸಮೀಪದ ಮಣಿಗೆರೆ ಗ್ರಾಮದ ಬಳಿ ಗುರುವಾರ ಜರುಗಿದೆ.
ಘಟನೆಯಲ್ಲಿ ಆಟೋ ಚಾಲಕ ದುರ್ಗೇಶ್ (21), ಕಾರುಚಾಲಕ ರಾಜೇಶ್ (28), ಕಾರಿನಲ್ಲಿದ್ದ ಅಭಿ, ಬಾಲು, ಚಂದನ್, ಮೋಹನ, ಟೆಂಫೋದಲ್ಲಿದ್ದ ವರಲಕ್ಷ್ಮೀ, ಶೆಟ್ಟಮ್ಮಣ್ಣಿ, ನಾಗರಾಜೇ ಅರಸ್, ಕಾಂಚನ, ಕಾಂತರಾಜೇಅರಸ್ ಅವರಿಗೆ ಗಂಭೀರವಾಗಿ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಾಳಾಗಿವೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ.
ಮಡೇನಹಳ್ಳಿಯ ದುರ್ಗೇಶ್ ತನ್ನ ಅಶೋಕ ಲೈಲ್ಯಾಂಡ್ ಗೂಡ್ಸ್ ಟೆಂಪೋ (ಕೆಎ11, ಬಿ2189)ದಲ್ಲಿ ತೊರೆಬೊಮ್ಮನಹಳ್ಳಿ ಗ್ರಾಮದಿಂದ ಮಳವಳ್ಳಿ ತಾಲೂಕು ಮೂಗನಕೊಪ್ಪಲು ಗ್ರಾಮದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಟಾಟಾ ಏಸ್ ವಾಹನದಲ್ಲಿ 25 ಮಂದಿಯನ್ನು ಕರೆದೊಯ್ಯುತ್ತಿದ್ದರು.
ಟೆಂಪೋ ಮಣಿಗೆರೆ ಬಳಿ ಹೋಗುತ್ತಿದ್ದಂತೆಯೇ ಮಲೈ ಮಹದೇಶ್ವರ ಬೆಟ್ಟಕ್ಕೆ ಹೋಗಿ ವಾಪಸ್ಸಾಗುತ್ತಿದ್ದ ಬೆಂಗಳೂರಿನ ಬನಶಂಕರಿ ನಿವಾಸಿಗಳಿದ್ದ ಕಾರಿ (ಕೆಎ 05, ಎನ್ ಜಿ 0443)ಗೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಗೂಡ್ಸ್ ಟೆಂಪೋ ರಸ್ತೆ ಮಧ್ಯೆ ಮೊಗುಚಿ ಬಿದ್ದಿದೆ. ಟೆಂಪೋದಲ್ಲಿದ್ದವರಿಗೆ ಗಾಯಗಳಾಗಿದೆ. ಕಾರು ಸಹ ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ 5 ಮಂದಿಗೂ ಗಂಭೀರವಾಗಿ ಪೆಟ್ಟು ಬಿದ್ದಿದೆ.
ತಕ್ಷಣವೇ ಸ್ಥಳಕ್ಕಾಗಮಿಸಿದ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಪಿಐ ಆನಂದ್ ಹಾಗೂ ಸಿಬ್ಬಂದಿ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಕೆ.ಎಂ.ದೊಡ್ಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮದ್ದೂರು ಹಾಗೂ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಾಳುಗಳಾದ ರೇಖಾಮಣಿ, ಮಾಯಮ್ಮ, ಸವಿತ, ಅರುಣ, ಮಾಲೀನಿ, ಮಂಜುಳಾಮಣಿ, ಭಾಗ್ಯ, ಸುಶೀಲ, ಸುಗುಣ, ಯಶೋಧಮಣಿ, ಪುಟ್ಟಮಣಿ, ಶಿಲ್ಪಾವತಿ, ಸುರೇಖಾ, ಶಿಲ್ಪ, ಚಂದನ್, ಪ್ರಭುರಾಜೆ ಅರಸು, ಸವಿತ, ಪ್ರೇಮಮ್ಮ, ರತ್ನಮ್ಮ, ಲಕ್ಷ್ಮಮ್ಮ, ಬಾಲಕೃಷ್ಣ, ಮೋಹನ್, ಅಭಿಷೇಕ್ ಅವರು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮೂವರನ್ನು ಮೈಸೂರಿನ ಆಸ್ಪತ್ರೆ ರವಾನಿಸಲಾಗಿದೆ.
ಅಪಘಾತ ನಡೆದ ಸ್ಥಳಕ್ಕೆ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ತಾಲೂಕು ತಹಸೀಲ್ದಾರ್ ಡಾ.ಸ್ಮಿತಾರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಗಾಯಾಳುಗಳ ಬಗ್ಗೆ ವಿವರ ಪಡೆಯಲು ಮಂಡ್ಯ ವಿಮ್ಸ್‌ಗೆ ತೆರಳಿದರು.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಸುದ್ಧಿ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ಕೆ.ಎಂ.ಉದಯ್, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.ಗೂಡ್ಸ್ ಟೆಂಪೋ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಗಂಭೀರವಾಗಿ ಗಾಯಗೊಂಡವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿ, ಸಾಂತ್ವನ ಹೇಳಿ ಧೈರ್ಯ ತುಂಬಿದ್ದೇನೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಾಲೂಕಿನ ಆಡಳಿತ ವೈದ್ಯಾಧಿಕಾರಿ ರವೀಂದ್ರ ಬಿ.ಗೌಡ ಅವರು ಸ್ಥಳದಲ್ಲೇ ಇದ್ದು ಚಿಕಿತ್ಸೆ ನೀಡುವಂತೆ ಮತ್ತು ಡಿಎಚ್‌ಒ ಅವರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದೇನೆ.
- ಡಿ.ಸಿ.ತಮ್ಮಣ್ಣ, ಮಾಜಿ ಸಚಿವರು