ಆನೇಕಲ್‌ : ಮರದ ವಸ್ತುಗಳ ಫರ್ನೀಚರ್‌ ಕಂಪನಿಯಲ್ಲಿ ಆಕಸ್ಮಿಕ ಬೆಂಕಿ : ಕಾರ್ಮಿಕ ಸಜೀವ ದಹನ

| Published : Nov 11 2024, 12:45 AM IST / Updated: Nov 11 2024, 04:44 AM IST

ಸಾರಾಂಶ

ಸೋಫಾ, ಕುರ್ಚಿ,ಕಿಟಕಿ ಬಾಗಿಲು ಮುಂತಾದ ಮರದ ವಸ್ತುಗಳನ್ನು ತಯಾರಿಸುವ ಫರ್ನೀಚರ್‌ ಕಂಪನಿಗೆ ಆಕಸ್ಮಿಕ ಬೆಂಕಿಬಿದ್ದು ಕಾರ್ಮಿಕ ನೋರ್ವ ಸಂಪೂರ್ಣ ಸುಟ್ಟು ಕರಕಲಾಗಿ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಯಡವನ ಹಳ್ಳಿಯಲ್ಲಿ ನಡೆದಿದೆ.

 ಆನೇಕಲ್‌ :  ಸೋಫಾ, ಕುರ್ಚಿ,ಕಿಟಕಿ ಬಾಗಿಲು ಮುಂತಾದ ಮರದ ವಸ್ತುಗಳನ್ನು ತಯಾರಿಸುವ ಫರ್ನೀಚರ್‌ ಕಂಪನಿಗೆ ಆಕಸ್ಮಿಕ ಬೆಂಕಿಬಿದ್ದು ಕಾರ್ಮಿಕ ನೋರ್ವ ಸಂಪೂರ್ಣ ಸುಟ್ಟು ಕರಕಲಾಗಿ ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಯಡವನ ಹಳ್ಳಿಯಲ್ಲಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಗೋವಿಂದ (33) ಮೃತ ಕಾರ್ಮಿಕ. ಗೋವಿಂದ ಕಳೆದ ಮೂರು ವರ್ಷಗಳಿಂದ ಶ್ರೀರಾಮ್ ಅಂಡ್ ಕೋ ಪರ್ನಿಚರ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಕಾರ್ಮಿಕರಿಗಾಗಿ ವಾಸಿಸಲು ಪ್ರತ್ಯೇಕ ಶೆಡ್‌ಗಳನ್ನು ನಿರ್ಮಿಸಿದ್ದರೂ ಮೃತ ಕಾರ್ಮಿಕ ಕಾರ್ಖಾನೆಯಲ್ಲಿ ಮಲಗಿದ್ದನು. ಕಾರ್ಖಾನೆಗೆ ಆಕಸ್ಮಿಕ ಬೆಂಕಿ ಬಿದ್ದು ಕೆನ್ನಾಲಿಗೆ ಎಲ್ಲೆಡೆ ಹರಡಿದೆ. 

ಆಗ ಕಾರ್ಮಿಕನಿಗೆ ಎಚ್ಚರವಾಗಿ ಜೀವ ಉಳಿಸಿಕೊಳ್ಳಲು ಬಾಗಿಲವರೆಗೆ ಬಂದಿದ್ದಾನೆ ದುರಾದೃಷ್ಟವಶಾತ್‌ ಬೆಂಕಿಯಲ್ಲಿ ಸಜೀವವಾಗಿ ಸುಟ್ಟು ಮೃತಪಟ್ಟಿದ್ದಾನೆ. ಶ್ರೀರಾಮ್ ಅಂಡ್ ಕೋ ಪರ್ನಿಚರ್ ಕಂಪನಿ ಸಂಪೂರ್ಣ ಬೆಂಕಿಗೆ ಆಹುತಿಆಗಿದೆ. ಘಟನೆಯಲ್ಲಿ ಅಂದಾಜು 4 ಕೋಟಿ ರು.ಮೌಲ್ಯ ನಷ್ಟವಾಗಿದೆ ಎಂದು ಮಾಲೀಕ ಹರ್ಷದ್ ಪಟೇಲ್ ತಿಳಿಸಿದ್ದಾರೆ. 

ಘಟನಾ ಸ್ಥಳದಲ್ಲಿ ಮುಂಜಾಗ್ರತ ಕ್ರಮ ಅಳವಡಿಸಲಾಗಿತ್ತು. ಘಟನೆಗೆ ಕಾರಣ ತಿಳಿದುಬಂದಿಲ್ಲ. ಮೃತ ಕಾರ್ಮಿಕನ ಕುಟುಂಬಕ್ಕೆ ನೆರವು ನೀಡುವುದಾಗಿ ಮಾಲೀಕರು ಭರವಸೆ ನೀಡಿದ್ದಾರೆ.ಈ ಸಂಬಂಧ ಅತ್ತಿಬೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಫರ್ನೀಚರ್‌ ಕಂಪನಿಯ ಮಾಲೀಕನನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಗಿದೆ.