ಸಾರಾಂಶ
ಮಂಡ್ಯ : ಆಕಸ್ಮಿಕವಾಗಿ ಹುಲ್ಲಿನ ಮೆದೆಗೆ ಬೆಂಕಿ ಬಿದ್ದ ಪರಿಣಾಮ ಲಕ್ಷಾಂತರ ರು. ಮೌಲ್ಯದ ಭತ್ತ ಮತ್ತು ಹುಲ್ಲು ಭಸ್ಮವಾಗಿರುವ ಘಟನೆ ತಾಲೂಕಿನ ಎಚ್.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಡೈರಿ ರಾಜು ಎಂಬುವರಿಗೆ ಸೇರಿದ ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಸಂಪೂರ್ಣ ಭಸ್ಮವಾಗಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಸೈಯ್ಯದ್ ಭೇಟಿ ನೀಡಿ ಪರಿಶೀಲನೆ ನಡೆಸಿ ನಷ್ಟವುಂಟಾಗಿರುವ ಬಗ್ಗೆ ತಹಸೀಲ್ದಾರ್‌ಗೆ ವರದಿ ನೀಡುವುದಾಗಿ ಭರವಸೆ ನೀಡಿದರು.
ವ್ಯಕ್ತಿ ನಾಪತ್ತೆ ದೂರು ದಾಖಲು
ನಾಗಮಂಗಲ: ತಾಲೂಕಿನ ಹೊಸಕ್ಕಿಪಾಳ್ಯ ಗ್ರಾಮ ನಿವಾಸಿ ಗುರುವಯ್ಯ (65) ಕಾಣೆಯಾಗಿದ್ದು, ಬೆಳ್ಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ವ್ಯಕ್ತಿಯು 6 ಅಡಿ ಎತ್ತರ, ಕೋಲು ಮುಖ, ಸಾಧರಣ ಮೈಕಟ್ಟು, ಕಪ್ಪು ಬಿಳಿ ಮಿಶ್ರಿತ ಮೀಸೆ, ಬಲಗಾಲಿನಲ್ಲಿ ಹೆಬ್ಬೆರಳು ಇರುವುದಿಲ್ಲ ಮನೆಯಿಂದ ಹೊರಡುವಾಗ ಬಿಳಿ ತುಂಬು ತೋಳಿನ ಶರ್ಟ್ ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಇವರ ಸುಳಿವು ಸಿಕ್ಕಲ್ಲಿ ದೂ-08234-287535/ 08234-286294 / 08232-224500 ಅನ್ನು ಸಂಪರ್ಕಿಸಬಹುದು ಎಂದು ಠಾಣೆ ಆರಕ್ಷಕ ಉಪನಿರೀಕ್ಷಕರು ತಿಳಿಸಿದ್ದಾರೆ.
ಅಪರಿಚಿತ ಶವ ಪತ್ತೆ
ಮದ್ದೂರು: ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಸುಮಾರು 55 ರಿಂದ 60 ವರ್ಷ ವಯಸ್ಸಿನ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಮೃತನ ಬಲಗೈ ಮೇಲೆ ಜಿ.ಆರ್.ಜ್ಯೋತಿ ಎಂದು ಹಸಿರು ಹಚ್ಚೆ ಇದೆ. ವಾರಸುದಾರರಿದ್ದಲ್ಲಿ ಮದ್ದೂರು ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ.