ನಟ ದರ್ಶನ್‌ಗೆ ಜೈಲಲ್ಲಿ 7 ತಾಸು ಐಟಿ ಗ್ರಿಲ್: ಪ್ರಶ್ನೆಗಳ ಸುರಿಮಳೆಗೆ ತಬ್ಬಿಬ್ಬಾದ ದಾಸ

| Published : Sep 27 2024, 08:55 AM IST

Actor Darshan

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಗರದ ಕೇಂದ್ರ ಕಾರಾಗೃ ಹದಲ್ಲಿರುವ ನಟ ದರ್ಶನ್ ಅವರನ್ನು ಆದಾಯ ತೆರಿಗೆ ಅಧಿಕಾರಿಗಳ (ಐಟಿ) ತಂಡ ಗುರುವಾರ ವಿಚಾರಣೆ ನಡೆಸಿತು

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಗರದ ಕೇಂದ್ರ ಕಾರಾಗೃ ಹದಲ್ಲಿರುವ ನಟ ದರ್ಶನ್ ಅವರನ್ನು ಆದಾಯ ತೆರಿಗೆ ಅಧಿಕಾರಿಗಳ (ಐಟಿ) ತಂಡ ಗುರುವಾರ ವಿಚಾರಣೆ ನಡೆಸಿತು. ರೇಣುಕಾಸ್ವಾಮಿ ಕೊಲೆ ಆರೋಪವನ್ನು ಬೇರೊಬ್ಬರು ಒಪ್ಪಿಕೊಳ್ಳಲು 80 ಲಕ್ಷ ನಗದು ನೀಡಲು ಉದ್ದೇಶಿಸಲಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದರ್ಶನ್‌ರನ್ನು ಕಾರಾಗೃಹದಲ್ಲಿ ವಿಚಾರಣೆ ನಡೆಸಿದರು.

ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆವರೆಗೆ ದರ್ಶನ್ ಅವರ ವಿಚಾರಣೆ ನಡೆಸಲಾಯಿತು. ಐಟಿ ವಿಚಾರಣೆ ವೇಳೆ ನಟ ದರ್ಶನ್ ಪರ ಆಡಿಟರ್ ಎಂ.ಆರ್.ರಾವ್, ಮತ್ತವರ ಸಹಾಯಕ ವಕೀಲರೂ ಆಗಿರುವ ರಾಮಸಿಂದ್ ಅವರು ಸಹ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದರು. ವಿಚಾರಣೆ ವೇಳೆ ಏನಾದರೂ ಸ್ಪಷ್ಟನೆ ಅಗತ್ಯವಿದ್ದಾಗ ಮಾತ್ರ ಐಟಿ ಅಧಿಕಾ ರಿಗಳು ಆಡಿಟರ್‌ಗಳನ್ನು ಕರೆಸಿಕೊಂಡರು.

ಬೆಳಗ್ಗೆ 11.30ರ ವೇಳೆಗೆ ಐವರು ಆದಾಯ ತೆರಿಗೆ ಅಧಿಕಾರಿಗಳ ತಂಡ ಕಾರಾಗೃಹಕ್ಕೆ ಆಗಮಿಸಿತು. ಲ್ಯಾಪ್‌ಟಾಪ್ ಹಾಗೂ ಕೆಲವೊಂದು ದಾಖಲೆ ಪತ್ರಗಳನ್ನು ಹಿಡಿದು ಐಟಿ ಅಧಿಕಾರಿಗಳು ಜೈಲು ಪ್ರವೇಶಿಸಿದರು. ಕೆಲ ಹೊತ್ತಿನ ಬಳಿಕ ಜೈಲಿನ ಸಿಬ್ಬಂದಿ ದರ್ಶನ್ ಅವರನ್ನು ಹೈ-ಸೆಕ್ಯೂರಿಟಿ ಸೆಲ್‌ನಿಂದ ಕಾರಾಗೃಹದ ಅಧೀಕ್ಷಕರ ಕಚೇರಿಗೆ ಕರೆ ತಂದರು. ಕೊಲೆ ಪ್ರಕರಣದಲ್ಲಿ ಹಣ ಬಳಕೆ ಕುರಿತು ಪ್ರಶ್ನೆಗಳನ್ನು ಕೇಳಿದ ಅಧಿಕಾರಿಗಳ ತಂಡ, ಇದೇ ವೇಳೆ ದರ್ಶನ್ ಹೇಳಿಕೆ ದಾಖಲಿಸಿಕೊಂಡರು. ಐಟಿ ಅಧಿಕಾರಿಗಳ ವಿಚಾರಣೆ ವೇಳೆ ದರ್ಶನ್ ಭೀತಿಯಲ್ಲಿದ್ದರು. ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸುತ್ತಿದ್ದರು. ಹಣ ವರ್ಗಾವಣೆ ಹಾಗೂ ಕೊಲೆ ಪ್ರಕರಣದಲ್ಲಿ ಹಣ ಬಳಕೆಯ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡುವಾಗ ದರ್ಶನ್ ಹಿಂದೇಟು ಹಾಕುತ್ತಿದ್ದರು. ದರ್ಶನ್ ತುಂಬ ಬಳಲಿದಂತೆ ಕಂಡು ಬಂದರು. ಐಟಿ ಗ್ರಿಲ್‌ನಿಂದ ತೊಳಲಾಟದಲ್ಲಿದ್ದಂತೆ ಕಂಡು ಬಂದ ದರ್ಶನ್, ಮಧ್ಯಾಹ್ನ ಊಟ ಮಾಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಚಾರಣೆಗೆಂದು ನ್ಯಾಯಾಲಯದಿಂದ ಎರಡು ದಿನಗಳ ಸಮಯ ಪಡೆದು ಬಂದಿದ್ದ ಐಟಿ ಅಧಿಕಾರಿಗಳು ಒಂದೇ ದಿನದಲ್ಲಿ ವಿಚಾರಣೆ ಪೂರ್ಣಗೊಳಿಸಿದರು. ಗುರುವಾರ ಸಂಜೆ 7 ಗಂಟೆಗೆ ವಿಚಾರಣೆ ಮುಗಿಯುತ್ತಿದ್ದಂತೆ ಐಟಿ ಅಧಿಕಾರಿಗಳು ಬೆಂಗಳೂರಿಗೆ ತೆರಳಿದರು.

ವಿಚಾರಣೆ ಮುಗಿದ ಬಳಿಕ ನಟ ದರ್ಶನ್ ಅವರನ್ನು ಡೆವಿಲ್ ಸಿನಿಮಾ ನಿರ್ಮಾಪಕ ಜೆ.ವಿ.ಪ್ರಕಾಶ್, ಆಪ್ತರಾದ ಸುನಿಲ್‌ಕುಮಾರ್, ಶ್ರೀನಿವಾಸ್ ಭೇಟಿ ಮಾಡಿದರು. ಸುಮಾರು 20 ನಿಮಿಷಗಳ ಕಾಲ ಮಾತನಾಡಲು ಅವಕಾಶ ನೀಡಲಾಗಿತ್ತು. ದರ್ಶನ್ ಆಪ್ತರು ತಾವು ತಂದಿದ್ದ ಸಿಹಿತಿನಿಸು, ಬಟ್ಟೆಗಳನ್ನು ದರ್ಶನ್‌ಗೆ ನೀಡಿದರು.