ಬೆಂಗಳೂರು ಕೆಫೆ ಸ್ಫೋಟ : ಮಾಸ್ಟರ್‌ಮೈಂಡ್‌ ಬಂಧನ

| Published : Apr 13 2024, 01:05 AM IST / Updated: Apr 13 2024, 04:57 AM IST

ಸಾರಾಂಶ

ಬೆಂಗಳೂರಿನ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದಲ್ಲಿ 43 ದಿನಗಳಿಂದ ತಲೆಮರೆಸಿಕೊಂಡಿದ್ದ ‘ಶಿವಮೊಗ್ಗ ಐಸಿಸ್ ಮಾಡ್ಯುಲ್‌’ನ ಇಬ್ಬರು ಮೋಸ್ಟ್‌ ವಾಂಟೆಡ್‌ ಶಂಕಿತ ಉಗ್ರರನ್ನು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ಸಮೀಪ ರಾಷ್ಟ್ರೀಯ ತನಿಖಾ ದಳ  ಬಂಧಿಸಿದೆ

ಬೆಂಗಳೂರು :  ಬೆಂಗಳೂರಿನ ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣದಲ್ಲಿ 43 ದಿನಗಳಿಂದ ತಲೆಮರೆಸಿಕೊಂಡಿದ್ದ ‘ಶಿವಮೊಗ್ಗ ಐಸಿಸ್ ಮಾಡ್ಯುಲ್‌’ನ ಇಬ್ಬರು ಮೋಸ್ಟ್‌ ವಾಂಟೆಡ್‌ ಶಂಕಿತ ಉಗ್ರರನ್ನು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾ ಸಮೀಪ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಭರ್ಜರಿ ಕಾರ್ಯಾಚರಣೆ ನಡೆಸಿ ಶುಕ್ರವಾರ ಮುಂಜಾನೆ ಸೆರೆ ಹಿಡಿದಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾವೀರ್ ಹುಸೇನ್ ಶಾಜಿಬ್‌ ಹಾಗೂ ಅಬ್ದುಲ್ ಮತೀನ್ ತಾಹಾ ಬಂಧಿತರು. ಈ ಪೈಕಿ ಮುಸಾವೀರ್‌ ಕೆಫೆಯಲ್ಲಿ ಬಾಂಬ್‌ ಇಟ್ಟಿದ್ದರೆ, ಮತೀನ್‌ ಇಡೀ ಪ್ರಕರಣದ ಮಾಸ್ಟರ್‌ಮೈಂಡ್‌ ಎಂದು ಎನ್‌ಐಎ ಮಾಹಿತಿ ನೀಡಿದೆ. ಇದರೊಂದಿಗೆ ಕೆಫೆ ಸ್ಫೋಟ ಕೃತ್ಯದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಈ ಮೊದಲು ಲಾಜಿಸ್ಟಿಕ್ ನೆರವು ನೀಡಿದ ಆರೋಪದ ಮೇರೆಗೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕಳಸದ ಮುಜಾಮಿಲ್‌ ಷರೀಫ್‌ ಹಾಗೂ ಹಳೇ ಪ್ರಕರಣದಲ್ಲಿ ಜೈಲಿನಲ್ಲಿದ್ದ ಮುಸಾವೀರ್ ಸಹಚರ ಮಾಝ್‌ ಮುನೀರ್‌ ಅಹ್ಮದ್‌ನನ್ನು ಎನ್‌ಐಎ ಬಂಧಿಸಿತ್ತು.

ಕೆಫೆ ಬಾಂಬ್ ಸ್ಫೋಟದ ಬಳಿಕ ರಾಜ್ಯ-ಹೊರ ರಾಜ್ಯಗಳಲ್ಲಿ ಅಲೆದು ಕೊನೆಗೆ ಪಶ್ಚಿಮ ಬಂಗಾಳದ ಕೋಲ್ಕತಾ ಸಮೀಪದ ಮೇದಿನಿಪುರದ ಹೋಟೆಲ್‌ನಲ್ಲಿ ನಕಲಿ ಹೆಸರು ಬಳಸಿ ಶಂಕಿತ ಉಗ್ರರು ವಾಸ್ತವ್ಯ ಹೂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸ್ಥಳೀಯ ಪೊಲೀಸರ ಸಹಕಾರದಲ್ಲಿ ಎನ್‌ಐಎ ನಡೆಸಿದ ದಾಳಿ ಯಶಸ್ಸು ಕಂಡಿದೆ. ಆನಂತರ ಬಂಧಿತರನ್ನು ಕೋಲ್ಕತಾ ನ್ಯಾಯಾಲಯದ ಹಾಜರುಪಡಿಸಿದ ಎನ್‌ಐಎ, ನಂತರ ಟ್ರಾನ್ಸಿಟ್‌ ವಾರೆಂಟ್ ಪಡೆದು ಬೆಂಗಳೂರಿಗೆ ಕರೆತಂದಿದೆ.

ಬೆಂಗಳೂರು ಟು ಕೋಲ್ಕತಾ: ಕಳೆದ ಮಾ.1 ರಂದು ಬೆಂಗಳೂರಿನ ಐಟಿ ಕಾರಿಡಾರ್‌ ಕುಂದಲಹಳ್ಳಿ ಕಾಲೋನಿಯಲ್ಲಿರುವ ದಿ ರಾಮೇಶ್ವರ ಕೆಫೆಗೆ ಗ್ರಾಹಕನಂತೆ ತೆರಳಿ ಟಿಫನ್‌ ಬಾಕ್ಸ್ ಬ್ಯಾಗ್‌ನಲ್ಲಿ ಬಾಂಬ್ ಇಟ್ಟು ಮುಸಾವೀರ್ ಪರಾರಿಯಾಗಿದ್ದ. ಬಾಂಬ್‌ ಸ್ಫೋಟದ ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಕೃತ್ಯದ ಹಿಂದೆ ಭಯೋತ್ಪಾದಕ ಸಂಘಟನೆ ಕೈವಾಡವಿದೆ ಎಂದು ಖಚಿತವಾದ ಕೂಡಲೇ ಎನ್‌ಐಎ ರಂಗ ಪ್ರವೇಶ ಮಾಡಿತ್ತು. ಅಷ್ಟರಲ್ಲಿ ಶಂಕಿತ ಉಗ್ರರ ಜಾಡು ಹಿಡಿಯುವಲ್ಲಿ ಸಿಸಿಬಿ ಪೊಲೀಸರು ಕೂಡ ಯಶಸ್ಸು ಕಂಡಿದ್ದರು.

ಕೆಫೆ ವಿಧ್ವಂಸಕ ಕೃತ್ಯದಲ್ಲಿ ಬಾಂಬರ್‌ ಬೆನ್ನುಹತ್ತಿದ್ದ ಎನ್‌ಐಎ ಹಾಗೂ ಸಿಸಿಬಿ, ಕುಂದಲಹಳ್ಳಿಯಿಂದ ಬಳ್ಳಾರಿವರೆಗೆ ಸುಮಾರು 800ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲಿಸಿದ್ದವು. ಆ ದೃಶ್ಯಾವಳಿಗಳಲ್ಲಿದ್ದ ಶಂಕಿತನಿಗೂ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿರುವ ಮುಸಾವೀರ್‌ ಹುಸೇನ್ ಶಾಜಿಬ್‌ ಭಾವಚಿತ್ರಕ್ಕೂ ತಾಳೆಯಾಗಿತ್ತು. ಅಲ್ಲದೆ ಕೆಫೆಗೆ ಬಾಂಬ್ ಇಡಲು ಬಂದಾಗ ಮುಸಾವೀರ್ ಧರಿಸಿದ್ದ ಕ್ಯಾಪ್‌ ಸಹ ಆತನ ಗುರುತು ಪತ್ತೆಗೆ ಮಹತ್ವದ ಸುಳಿವು ನೀಡಿತ್ತು.

ಚೆನ್ನೈ ನಗರದ ಮಾಲ್‌ನಲ್ಲಿ ಕ್ಯಾಪ್ ಖರೀದಿಸಲು ತೆರಳಿದ್ದಾಗ ಆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಮುಸಾವೀರ್‌ ಹಾಗೂ ಮತೀನ್‌ ಸೆರೆಯಾಗಿದ್ದರು. ಕೆಫೆ ಕೃತ್ಯದಲ್ಲಿ ಈ ಇಬ್ಬರ ಪಾತ್ರದ ಖಚಿತವಾದ ಬಳಿಕ ಎನ್‌ಐಎ, ಶಂಕಿತರ ಸುಳಿವು ನೀಡಿದರೆ 10 ಲಕ್ಷ ರು. ಬಹುಮಾನ ಘೋಷಿಸಿತ್ತು.

2022ರಿಂದ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ನಡೆದಿರುವ ಭಯೋತ್ಪಾದಕ ಕೃತ್ಯಗಳಲ್ಲಿ ಶಿವಮೊಗ್ಗ ಮಾಡ್ಯುಲ್‌ನ ಮುಸಾವೀರ್ ಹಾಗೂ ಮತೀನ್ ಪ್ರಮುಖ ಪಾತ್ರವಹಿಸಿದ್ದರು. ಮೂರು ವರ್ಷಗಳಿಂದ ಎನ್‌ಐಎ ಕೈ ಸಿಗದೆ ತಲೆಮರೆಸಿಕೊಂಡಿದ್ದ ಈ ಇಬ್ಬರು ವಿದೇಶದಲ್ಲಿ ನೆಲೆಸಿರಬಹುದು ಎಂದು ಶಂಕೆ ವ್ಯಕ್ತವಾಗಿತ್ತು. ಆದರೆ ಕೆಫೆ ಸ್ಫೋಟದಲ್ಲಿ ಈ ಇಬ್ಬರ ಕೈವಾಡ ಗೊತ್ತಾದ ಕೂಡಲೇ ಎಚ್ಚೆತ್ತ ಎನ್‌ಐಎ, ಮತೀನ್ ಹಾಗೂ ಮುಸಾವೀರ್ ಬೇಟೆಗಿಳಿಯಿತು.

ಕೆಫೆ ಬಾಂಬ್ ಇಟ್ಟ ಬಳಿಕ ಬಳ್ಳಾರಿ ಮೂಲಕ ಕರ್ನಾಟಕ ತೊರೆದ ಶಂಕಿತರು, ಕೇರಳ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಅಡ್ಡಾಡಿ ಕೊನೆಗೆ ಪಶ್ಚಿಮ ಬಂಗಾಳದ ಕೋಲ್ಕತಾ ತಲುಪಿದ್ದರು. ಶಿವಮೊಗ್ಗ ಐಸಿಸ್‌ ಸಂಪರ್ಕ ಹಿನ್ನಲೆಯಲ್ಲಿ ಕರ್ನಾಟಕ, ಕೇರಳ, ಉತ್ತರಪ್ರದೇಶ ಹಾಗೂ ತಮಿಳುನಾಡು ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ದಾಳಿ ಶೋಧಿಸಿತ್ತು. ಆಗ ಚಿಕ್ಕಮಗಳೂರು ಜಿಲ್ಲೆ ಕಳಸದ ಮುಸಾಮಿಲ್ ಷರೀಫ್‌ನನ್ನು ಬಂಧಿಸಿದ ಎನ್‌ಐಎ, ನಂತರ ಶಿವಮೊಗ್ಗ ಪ್ರಕರಣಗಳಲ್ಲಿ ಜೈಲಿನಲ್ಲಿದ್ದ ಮಾಝ ಮುನೀರ್‌ನನ್ನು ಸಹ ವಶಕ್ಕೆ ಪಡೆದು ಆರೋಪಿಯನ್ನಾಗಿಸಿತು. ಈ ಇಬ್ಬರ ವಿಚಾರಣೆ ವೇಳೆ ಲಭ್ಯವಾದ ಮಾಹಿತಿ ಮೇರೆಗೆ ತನಿಖೆ ಚುರುಕುಗೊಳಿಸಿದ ಎನ್‌ಐಎಗೆ ಪಶ್ಚಿಮ ಬಂಗಾಳದ ಕೋಲ್ಕತಾ ಬಳಿ ಹೋಟೆಲ್‌ನಲ್ಲಿ ಶಂಕಿತರ ಸು‍ಳಿವು ಸಿಕ್ಕಿದೆ.

ಹೋಟೆಲ್‌ನ ರೂಮ್‌ನಲ್ಲೇ ಸೆರೆ:

ಕೋಲ್ಕತಾ ಸಮೀಪದ ಮೇದಿನಿಪುರದ ಹೋಟೆಲ್‌ನಲ್ಲಿ ನಕಲಿ ಹೆಸರು ಬಳಸಿ ಮುಸಾವೀರ್ ಹಾಗೂ ಮತೀನ್ ಉಳಿದುಕೊಂಡಿದ್ದರು. ಗಾಢ ನಿದ್ರೆಯಲ್ಲಿ ಶಂಕಿತರಿಗೆ ನಸುಕಿನಲ್ಲಿ ದುಃಸ್ವಪ್ನದಂತೆ ಎನ್ಐಎ ಅಧಿಕಾರಿಗಳು ಕಂಡಿದ್ದಾರೆ.

ಹೋಟೆಲ್‌ನಲ್ಲಿ ತಂಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಎನ್‌ಐಎ ಅಧಿಕಾರಿಗಳು, ಶುಕ್ರವಾರ ಮುಂಜಾನೆ ಸ್ಥಳೀಯ ಪೊಲೀಸರ ಜತೆ ಜಂಟಿ ಕಾರ್ಯಾಚರಣೆ ನಡೆಸಿ ಹೋಟೆಲ್‌ನ ರೂಮ್‌ನಲ್ಲೇ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಬೆಂಗಳೂರಿಗೆ ಶುಕ್ರವಾರ ರಾತ್ರಿ ಕರೆತಂದಿದ್ದಾರೆ. ಈ ಕಾರ್ಯಾಚರಣೆಗೆ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ಹಾಗೂ ತೆಲಂಗಾಣ ಪೊಲೀಸರು ಸಹಕಾರ ನೀಡಿದ್ದಾರೆ ಎಂದು ಎನ್‌ಐಎ ಪ್ರಕಟಣೆಯಲ್ಲಿ ಹೇಳಿದೆ.

ಉಗ್ರರು ಸಿಕ್ಕಿದ್ದು ಹೇಗೆ?

- ಮಾ.1ರಂದು ಬೆಂಗಳೂರಿನ ಕುಂದಲಹಳ್ಳಿಯ ಕೆಫೆಯಲ್ಲಿ ಬಾಂಬ್‌ ಸ್ಫೋಟಿಸಿದ್ದ ಆರೋಪಿಗಳು- ಆರೋಪಿಗಳ ಪತ್ತೆಗಾಗಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಜಾಲಾಡಿದ್ದ ತನಿಖಾಧಿಕಾರಿಗಳು

- 800ಕ್ಕೂ ಹೆಚ್ಚು ಸಿಸಿಟೀವಿ ದೃಶ್ಯ ಪರಿಶೀಲನೆ. ಬಾಂಬರ್‌ ಧರಿಸಿದ್ದ ಕ್ಯಾಪ್‌ ಆಧರಿಸಿ ತನಿಖೆ

- ಚೆನ್ನೈನಲ್ಲಿ ಕ್ಯಾಪ್‌ ಖರೀದಿಸಿದ್ದು ಪತ್ತೆ. ಕ್ಯಾಪ್‌ ಅಂಗಡಿಯ ಕ್ಯಾಮೆರಾದಲ್ಲಿ ಶಂಕಿತರ ಫೋಟೋ ಸೆರೆ

- ಏತನ್ಮಧ್ಯೆ ಕೆಫೆ ಸ್ಫೋಟ ಬಳಿಕ ಬಳ್ಳಾರಿ ಮೂಲಕ ಕರ್ನಾಟಕ ತೊರೆದಿದ್ದ ಶಂಕಿತ ಉಗ್ರರು

- ಕೇರಳ, ತೆಲಂಗಾಣದಲ್ಲಿ ಅಡ್ಡಾಡಿ ಕೊನೆಗೆ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಆಶ್ರಯ

- ಈ ನಡುವ ಚಿಕ್ಕಮಗಳೂರಿನ ಮುಸಾಮಿಲ್‌ ಷರೀಫ್‌ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದ ಎನ್‌ಐಎ

- ಜೈಲಿನಲ್ಲಿ ಇದ್ದ ಮಾಝ್‌ ಮುನೀರ್‌ನನ್ನೂ ವಶಕ್ಕೆ ಪಡೆದ ಅಧಿಕಾರಿಗಳು. ಇಬ್ಬರ ವಿಚಾರಣೆ

- ಅವರಿಬ್ಬರೂ ಕೊಟ್ಟ ಮಾಹಿತಿ ಆಧಾರದ ಮೇರೆಗೆ ಕೋಲ್ಕತಾದಲ್ಲಿ ಶಂಕಿತರಿರುವ ಮಾಹಿತಿ

- ನಕಲಿ ಹೆಸರು ಬಳಸಿ ರೂಂ ಪಡೆದಿದ್ದ ಆರೋಪಿಗಳು. ಗಾಢ ನಿದ್ರೆಯಲ್ಲಿದ್ದಾಗಲೇ ದಾಳಿ