ರನ್ಯಾ ಕೇಸಲ್ಲಿ ಡಿಆರ್‌ಐ, ಸಿಬಿಐ ಬಳಿಕ ಈಗ ಇ.ಡಿ. ಪ್ರವೇಶ - ಬಂಗಾರದ ದಾಸ್ತಾನೇ ಪತ್ತೆ!

| N/A | Published : Mar 14 2025, 07:49 AM IST

Ranya Gold Case

ಸಾರಾಂಶ

ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾರಾವ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮತ್ತು ಸಿಬಿಐ ಬಳಿಕ ಇದೀಗ ಜಾರಿ ನಿರ್ದೇಶನಾಲಯ (ಇ.ಡಿ)ದ ಎಂಟ್ರಿಯಾಗಿದೆ

ಬೆಂಗಳೂರು : ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾರಾವ್‌ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮತ್ತು ಸಿಬಿಐ ಬಳಿಕ ಇದೀಗ ಜಾರಿ ನಿರ್ದೇಶನಾಲಯ (ಇ.ಡಿ)ದ ಎಂಟ್ರಿಯಾಗಿದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಇ.ಡಿ. ಅಧಿಕಾರಿಗಳು ಗುರುವಾರ ರನ್ಯಾರಾವ್ ಮನೆ ಸೇರಿ ಆಕೆ ಆಪ್ತರ ಮನೆ, ಕಚೇರಿಗಳನ್ನು ಶೋಧ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ನಾಲ್ಕಕ್ಕೂ ಅಧಿಕ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ.

ರನ್ಯಾರಾವ್ ವಾಸಿಸುತ್ತಿದ್ದ ಲ್ಯಾವೆಲ್ಲೆ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌, ಡಿಆರ್‌ಐ ವಶದಲ್ಲಿರುವ ರನ್ಯಾ ಗೆಳೆಯ ತರುಣ್‌ ರಾಜ್‌ ನಿವಾಸ, ಕೋರಮಂಗಲದಲ್ಲಿನ ವೈಟ್‌ಗೋಲ್ಡ್‌ ಸಂಸ್ಥೆ ಟಿ.ಜೆ.ರಾವ್‌ ನಿವಾಸ ಸೇರಿ ಇತರೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ರಾವ್‌ ಅವರ ಮನೆಯಲ್ಲಿ ಭಾರಿ ಪ್ರಮಾಣದ ಚಿನ್ನದ ದಾಸ್ತಾನು ಪತ್ತೆಯಾಗಿದೆ. ಇದರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಚಿನ್ನ ಎಷ್ಟು ಎಂಬುದರ ಬಗ್ಗೆ ಪರಿಶೀಲನೆ ನಡೆದಿದೆ.

ಈ ನಡುವೆ, ರನ್ಯಾ ರಾವ್ ವಿಮಾನದ ಟಿಕೆಟ್ ಬುಕ್ ಮಾಡಿದವರು ಮತ್ತು ವಿದೇಶ ಪ್ರವಾಸಕ್ಕೆ ನೆರವು ನೀಡಿದವರು ಮತ್ತು ವ್ಯವಹಾರದಲ್ಲಿ ಪಾಲುದಾರರಾಗಿರುವವರಿಗೂ ಇ.ಡಿ.ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮಾಹಿತಿ ಸಂಗ್ರಹ:

ದಾಳಿ ವೇಳೆ ಪ್ರಕರಣ ಸಂಬಂಧ ಕೆಲ ಮಾಹಿತಿಗಳನ್ನು ಕ್ರೋಢೀಕರಿಸಲಾಗಿದೆ. ಹಗರಣದಲ್ಲಿ ಕೋಟ್ಯಂತರ ರು. ಅಕ್ರಮವಾಗಿ ವರ್ಗಾವಣೆಯಾಗಿರುವುದರಿಂದ ಇ.ಡಿ.ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಈ ಸಂಬಂಧ ವಿಚಾರಣೆ ನಡೆಸಿ ಅಗತ್ಯ ವಿಷಯ ಸಂಗ್ರಹಿಸಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆಯಾಗಿರುವುದಕ್ಕೆ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ. ಅಲ್ಲದೆ, ದಾಳಿ ವೇಳೆ ಇದ್ದವರ ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.

ಹೊಸ ತಿರುವು:

ಇ.ಡಿ. ಪ್ರವೇಶದಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಡಿಆರ್‌ಐ ದಾಳಿ ವೇಳೆ 2.16 ಕೋಟಿ ನಗದು, 2.2 ಕೋಟಿ ರು. ಮೌಲ್ಯದ ಚಿನ್ನ ಪತ್ತೆಯಾಗಿದೆ. ಕಾನೂನು ಪ್ರಕಾರ 2 ಲಕ್ಷ ರು.ಗಿಂತ ಹೆಚ್ಚಿನ ನಗದು ಇಟ್ಟುಕೊಳ್ಳುವಂತಿಲ್ಲ. ಒಂದು ವೇಳೆ ಇಟ್ಟುಕೊಳ್ಳುವುದಾದರೆ ಸೂಕ್ತ ದಾಖಲೆ ಒದಗಿಸಬೇಕು. ಕೋಟ್ಯಂತರ ರು. ಲಭ್ಯವಾಗಿರುವ ಹಿನ್ನೆಲೆಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ವೇಳೆ ಇ.ಡಿ ದಾಳಿ ನಡೆಸಿದೆ. ದಾಳಿ ವೇಳೆ ಕೆಲ ದಾಖಲೆಗಳನ್ನು ಪತ್ತೆ ಮಾಡಲಾಗಿದೆ ಎನ್ನಲಾಗಿದೆ.