ಅಕ್ರಮ ಚಟುವಟಿಕೆಗಳ ಆರೋಪಗಳ ಹಿನ್ನೆಲೆಯಲ್ಲಿ ಸೆರೆಮನೆಗಳಲ್ಲಿ ಕೈದಿಗಳ ಮೇಲೆ ಎಐ ಕಣ್ಗಾವಲು!

| N/A | Published : Apr 05 2025, 01:47 AM IST / Updated: Apr 05 2025, 04:32 AM IST

ಸಾರಾಂಶ

ಅಕ್ರಮ ಚಟುವಟಿಕೆಗಳ ಆರೋಪಗಳ ಹಿನ್ನೆಲೆಯಲ್ಲಿ ಸೆರೆಮನೆಗಳಲ್ಲಿ ಕೈದಿಗಳ ಮೇಲೆ ಕಣ್ಗಾವಲು ಬಿಗಿಗೊಳಿಸುವ ಸಲುವಾಗಿ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳ ಅಳವಡಿಕೆಗೆ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ನಿರ್ಧರಿಸಿದೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು :  ಅಕ್ರಮ ಚಟುವಟಿಕೆಗಳ ಆರೋಪಗಳ ಹಿನ್ನೆಲೆಯಲ್ಲಿ ಸೆರೆಮನೆಗಳಲ್ಲಿ ಕೈದಿಗಳ ಮೇಲೆ ಕಣ್ಗಾವಲು ಬಿಗಿಗೊಳಿಸುವ ಸಲುವಾಗಿ ಕೃತಕ ಬುದ್ಧಿಮತ್ತೆ (ಎಐ) ಕ್ಯಾಮೆರಾಗಳ ಅಳವಡಿಕೆಗೆ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ನಿರ್ಧರಿಸಿದೆ.

ಕಾರಾಗೃಹಗಳಲ್ಲಿ ಕೈದಿಗಳ ಮುಖ ಚಹರೆ ಪತ್ತೆ ಹಚ್ಚಲಿದ್ದು, ಸೆರೆಮನೆಯೊಳಗೆ ಕೈದಿಗಳ ಪ್ರತಿ ನಡೆ ಮೇಲೂ ಸಹ ಕಣ್ಣೀಡಲಿವೆ, ಇಷ್ಟು ಮಾತ್ರವಲ್ಲದೆ ಕೈದಿಗಳ ಭೇಟಿ ಬರುವ ಸಂದಶರ್ಕರ ಬಗ್ಗೆ ಸಹ ಎಐ ಮಾಹಿತಿ ಸಂಗ್ರಹಿಸಲಿದೆ.

ಈ ಎಐ ಕ್ಯಾಮೆರಾ ಅಳವಡಿಕೆ ಯೋಜನೆ ಪ್ರಾಯೋಗಿಕವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊದಲ ಹಂತದಲ್ಲಿ ಅನುಷ್ಠಾನಗೊಳ್ಳಲುತ್ತಿದ್ದು, ಹಂತ ಹಂತವಾಗಿ ಎಲ್ಲ ಜೈಲುಗಳಲ್ಲಿ ಸಹ ಯೋಜನೆ ವಿಸ್ತರಣೆಯಾಗಲಿದೆ. ಜೈಲುಗಳಲ್ಲಿ ನಿಯಾಮಬಾಹಿರವಾಗಿ ಸಜಾ ಹಾಗೂ ವಿಚಾರಣಾಧೀನ ಕೈದಿಗಳ ಪರಸ್ಪರ ಭೇಟಿ, ಮಾದಕ ವಸ್ತುಗಳ ಪೂರೈಕೆ, ಮೊಬೈಲ್ ಬಳಕೆ ಹಾಗೂ ವಿಶೇಷ ಸೌಲಭ್ಯ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆದಿರುವ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ ಕಾನೂನುಬಾಹಿರ ಕೃತ್ಯಗಳಿಗೆ ಕಾರಾಗೃಹ ಅಧಿಕಾರಿ-ಸಿಬ್ಬಂದಿ ನೆರವು ಬಗ್ಗೆ ಆರೋಪಗಳಿವೆ.

ಎಂಟು ತಿಂಗಳ ಹಿಂದೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ ಹಾಗೂ ಅವರ ಸಹಚರರಿಗೆ ವಿಶೇಷ ಸೌಲಭ್ಯ ಪ್ರಕರಣ ಬೆಳಕಿಗೆ ಬಂದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

ಕೈದಿಗಳು ಬ್ಯಾರಕ್ ದಾಟಿದರೆ ಮಾಹಿತಿ- ಡಿಐಜಿ:

ಕಾರಾಗೃಹಗಳಲ್ಲಿ ನಿಯಮಬಾಹಿರ ಕೃತ್ಯಗಳು ನಡೆಯದಂತೆ ಕಣ್ಗಾವಲು ವ್ಯವಸ್ಥೆಯನ್ನು ತಾಂತ್ರಿಕತೆ ಬಳಸಿಕೊಂಡು ಪರಿಷ್ಕರಿಸಲಾಗುತ್ತಿದ್ದು, ಈಗ ಜೈಲುಗಳಲ್ಲಿ ಎಐ ಕ್ಯಾಮೆರಾಗಳನ್ನು ಅಳ‍ವಡಿಸಲಾಗುತ್ತಿದೆ. ಈ ಕ್ಯಾಮೆರಾಗಳು ಜೈಲುಗಳಲ್ಲಿ ಕೈದಿಗಳ ಪ್ರತಿ ನಡೆ ಮೇಲೂ ನಿಗಾವಹಿಸುತ್ತವೆ ಎಂದು ಕಾರಾಗೃಹ ಇಲಾಖೆಯ ದಕ್ಷಿಣ ವಲಯ ಡಿಐಜಿ ದಿವ್ಯಶ್ರೀ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಜೈಲುಗಳಲ್ಲಿ ಕ್ಯಾಮೆರಾಗಳ ನಿರ್ವಹಣೆ ನಿಯಂತ್ರಣ ಕೊಠಡಿ ಆರಂಭಿಸಲಾಗಿದ್ದು, ಈ ನಿಯಂತ್ರಣ ಕೊಠಡಿಗೆ ಎಲ್ಲ ಕ್ಯಾಮೆರಾಗಳು ಸಂಪರ್ಕ ಹೊಂದಿರುತ್ತವೆ. ಹೀಗಾಗಿ ಅಕ್ರಮವಾಗಿ ತಮ್ಮ ಬ್ಯಾರಕ್‌ನಿಂದ ಬೇರೊಂದು ಬ್ಯಾರಕ್‌ಗೆ ಕೈದಿಗಳು ಪ್ರವೇಶಿಸಿದರೆ ತಕ್ಷಣವೇ ನಿಯಂತ್ರಣ ಕೊಠಡಿಗೆ ಕ್ಯಾಮೆರಾಗಳು ಮಾಹಿತಿ ರವಾನಿಸಲಿವೆ ಎಂದು ಹೇಳಿದರು.

ಅಲ್ಲದೆ ವಿಚಾರಣಾಧೀನ ಹಾಗೂ ಸಜಾ ಕೈದಿಗಳ ಭೇಟಿಗೆ ಬರುವ ಸಂದರ್ಶಕರ ಕುರಿತು ಎಐ ಕ್ಯಾಮೆರಾಗಳು ಮಾಹಿತಿ ಸಂಗ್ರಹಿಸುತ್ತವೆ. ಈ ಡಾಟಾ ಸುಮಾರು 3 ರಿಂದ 6 ತಿಂಗಳವರೆಗೆ ಸಹ ಇರುತ್ತದೆ. ಹೀಗಾಗಿ ಅಕ್ರಮ ಕೃತ್ಯಗಳು ನಡೆದರೆ ಕೂಡಲೇ ಮಾಹಿತಿ ಸಿಗಲಿದೆ ಎಂದು ದಿವ್ಯ ಶ್ರೀ ತಿಳಿಸಿದರು.

ಮೊದಲ ಹಂತವಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ₹2 ಕೋಟಿ ವೆಚ್ಚದಲ್ಲಿ 280 ಎಐ ಕ್ಯಾಮೆರಾಗಳ ಅಳವಡಿಸಲಾಗುತ್ತಿದ್ದು, ಮುಂದಿನ ಹಂತದಲ್ಲಿ ಎಲ್ಲ ಕಾರಾಗೃಹಗಳಲ್ಲಿ ಕೂಡ ಯೋಜನೆ ವಿಸ್ತರಣೆಯಾಗಲಿದೆ. ಇನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹಳೇ ಕ್ಯಾಮೆರಾಗಳನ್ನು ಎಐ ಕ್ಯಾಮೆರಾಗಳಿಗೆ ಮೇಲ್ದರ್ಜೆಗೇರಿಸಲಾಗಿದೆ ಎಂದು ಡಿಐಜಿ ಮಾಹಿತಿ ನೀಡಿದರು.

ಕಾರಾಗೃಹದಲ್ಲಿರುವ ಕೃತಕ ಬುದ್ಧಿಮತ್ತೆ ಕ್ಯಾಮೆರಾಗಳಲ್ಲಿ ಕ್ರಿಮಿನಲ್‌ ಹಿನ್ನೆಲೆಯ ಕೈದಿಗಳ ಮಾಹಿತಿ ಸಂಗ್ರಹವಾಗಿರುತ್ತದೆ. ಅವುಗಳನ್ನು ತನಿಖೆಗೆ ಅಗತ್ಯವಾದರೆ ಪೊಲೀಸರ ಜೊತೆಗೆ ಹಂಚಿಕೊಳ್ಳುತ್ತೇವೆ.ಸ

-ದಿವ್ಯಶ್ರೀ, ಡಿಐಜಿ, ಕಾರಾಗೃಹ ಇಲಾಖೆಯ ದಕ್ಷಿಣ ವಲಯ.