ಕುಂಭಮೇಳಕ್ಕೆ ತೆರಳಿ ವಾಪಸ್ ಆಗುತ್ತಿದ್ದ ವೃದ್ಧೆ ಆಗ್ರಾ ಎಕ್ಸ್ ಪ್ರೆಸ್ ಹೈವೇನಲ್ಲಿ ರಸ್ತೆ ಅಪಘಾತದಲ್ಲಿ ಸಾವು..!

| N/A | Published : Feb 27 2025, 12:32 AM IST / Updated: Feb 27 2025, 04:18 AM IST

ಕುಂಭಮೇಳಕ್ಕೆ ತೆರಳಿ ವಾಪಸ್ ಆಗುತ್ತಿದ್ದ ವೃದ್ಧೆ ಆಗ್ರಾ ಎಕ್ಸ್ ಪ್ರೆಸ್ ಹೈವೇನಲ್ಲಿ ರಸ್ತೆ ಅಪಘಾತದಲ್ಲಿ ಸಾವು..!
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಪ್ರದೇಶದ ಲಕ್ನೋ ಮತ್ತು ಆಗ್ರಾ ಎಕ್ಸ್ ಪ್ರೆಸ್ ಹೈವೇನಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಂಜುಳಾ ಬೇನ್ ತಾವು ಪ್ರವಾಸಕ್ಕೆ ತೆರಳಿದ್ದ ಮಿನಿ ಬಸ್ಸಿನಿಂದ ಇಳಿದು ರಸ್ತೆದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಪರಾರಿಯಾಗಿದೆ.

 ಮದ್ದೂರು : 35 ಮಂದಿ ಭಕ್ತರೊಂದಿಗೆ ಕುಂಭಮೇಳಕ್ಕೆ ತೆರಳಿ ವಾಪಸ್ ಬರುತ್ತಿದ್ದ ವೃದ್ಧೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಕ್ನೋ ಬಳಿ ಬುಧವಾರ ಮುಂಜಾನೆ ಜರುಗಿದೆ.ಪಟ್ಟಣದ ಕೊಲ್ಲಿ ವೃತ್ತದಲ್ಲಿ ರಾಮಾಣಿ ಸಾಮಿಲ್ ಮಾಲೀಕ ಜಯಂತಿಲಾಲ್ ಪಟೇಲ್ ಪತ್ನಿ ಮಂಜುಳಾ ಬೇನ್ (60) ಅಪಘಾತದಲ್ಲಿ ಮೃತಪಟ್ಟವರು.

ಉತ್ತರ ಪ್ರದೇಶದ ಲಕ್ನೋ ಮತ್ತು ಆಗ್ರಾ ಎಕ್ಸ್ ಪ್ರೆಸ್ ಹೈವೇನಲ್ಲಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಂಜುಳಾ ಬೇನ್ ತಾವು ಪ್ರವಾಸಕ್ಕೆ ತೆರಳಿದ್ದ ಮಿನಿ ಬಸ್ಸಿನಿಂದ ಇಳಿದು ರಸ್ತೆದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಪರಾರಿಯಾಗಿದೆ.

ಅಪಘಾತದಿಂದ ತೀವ್ರವಾಗಿ ಗಾಯಗೊಂಡ ಮಂಜುಳಾ ಬೇನ್ ಸ್ಥಳದಲ್ಲೇ ಕೊನೆ ಉಸಿರೆಳದಿದ್ದಾರೆ. ಪಟ್ಟಣದ 35 ಮಂದಿ ಭಕ್ತಾದಿಗಳು ಫೆಬ್ರವರಿ 19ರಂದು ಮಿನಿ ಬಸ್‌ನಲ್ಲಿ ಕುಂಭಮೇಳ ಪ್ರವಾಸಕ್ಕೆ ತೆರಳಿದ್ದರು. ಕುಂಭಮೇಳದಿಂದ ಶಿರಡಿ, ಸಿಂಗಾಪುರ, ಪಂಡರಾಪುರ, ಪ್ರಯಾಗ್ ರಾಜ್, ಕಾಳಿ ಮತ್ತು ಅಯೋಧ್ಯ ಪ್ರವಾಸದ ನಂತರ ಮದ್ದೂರಿಗೆ ವಾಪಸ್ ಆಗುತ್ತಿದ್ದರು.

ಲಕ್ನೋ ಸಮೀಪದ ಆಗ್ರಾ ಎಕ್ಸ್ ಪ್ರೆಸ್ ಹೈವೇನಲ್ಲಿ ಬೆಳಗಿನ ಜಾವ ರಸ್ತೆ ಬದಿ ಬಸ್ ನಿಲ್ಲಿಸಿ ಮೂವರು ಮಹಿಳೆಯರು ಮೂತ್ರ ವಿಸರ್ಜನೆಗಾಗಿ ಇಳಿದಿದ್ದಾರೆ. ಈ ಪೈಕಿ ಮಂಜುಳಾ ಬೆನ್ ರಸ್ತೆ ದಾಟುತ್ತಿದ್ದಾಗ ಅಪಘಾತ ಸಂಭವಿಸಿದೆ.

ಈ ಸಂಬಂಧ ಕನೋಜ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕನೋಜ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಮಂಜುಳಾ ಬೆನ್ ಶವದ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.

ಗಾಂಜಾ ಮಾರಾಟ: ವ್ಯಕ್ತಿ ಬಂಧನ

ಮದ್ದೂರು: ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿ ಸಮೀಪದ ಸರ್ವಿಸ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಟ್ಟಣದ ರಾಮರಹಿಮ್ ನಗರ ಬಡಾವಣೆಯ ಭಾಷ ಪುತ್ರ ಸೊಹೇಲ್ ಪಾಷಾ (30) ಬಂಧಿತ ಆರೋಪಿ. ಪಟ್ಟಣದ ಹೊರವಲಯದ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಸಮೀಪದ ಸರ್ವಿಸ್ ರಸ್ತೆಯಲ್ಲಿ ಗಾಂಜಾ ಪ್ಯಾಕೆಟ್ ಗಳನ್ನು ಮಾರುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿ ಸುಹೇಲ್ ಪಾಷಾನನ್ನು ಬಂಧಿಸಿ ಆತನಿಂದ 150 ಗ್ರಾಂ ಗಾಂಜಾ ಪ್ಯಾಕೆಟ್‌ಗಳನ್ನು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ.

ಬಂಧಿತನ ವಿರುದ್ಧ ಮಾದಕ ವಸ್ತುಗಳ ನಿಷೇಧ ಕಾಯ್ದೆ ಅನ್ವಯ ಪ್ರಕಾರ ಮಾಡಿಕೊಂಡ ನಂತರ ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.