ಸಾರಾಂಶ
ಆನೇಕಲ್ : ವ್ಯಕ್ತಿಯೊಬ್ಬರು ಹಣಕಾಸು ವ್ಯವಹಾರದಲ್ಲಿ ಸಿಲುಕಿಕೊಂಡು ಗೆಳೆಯರಿಂದ ನ್ಯಾಯ ಸಿಗದ ಕಾರಣ ವಿಡಿಯೋ ಮಾಡಿ ಸ್ಥಳೀಯ ಕೆಲ ರಾಜಕೀಯ ಮುಖಂಡರ ಹೆಸರು ಪ್ರಸ್ತಾಪಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಸರಸ್ವತಿ ಶಾಲೆ ಬಳಿ ನಡೆದಿದೆ.
ಗಡಿಗ್ರಾಮ ಗೆರಟಿಗನ ನಿವಾಸಿ ಆನೇಕಲ್‌ನಲ್ಲಿ ವಾಸವಿದ್ದ ಪ್ರವೀಣ್ ಕುಮಾರ್ (32) ಆತ್ಮ ಹತ್ಯೆ ಮಾಡಿಕೊಂಡವರು. ಶುಕ್ರವಾರ ಬೆಳಗಿನ ಜಾವ ಮನೆಯಿಂದ ತನ್ನ ಬೈಕ್‌ನಲ್ಲಿ ಹೊರಟ ಪ್ರವೀಣ್ ಸರಸ್ವತಿ ವಿದ್ಯಾ ಮಂದಿರ ರಸ್ತೆಯಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮೃತನ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಾಲತಾಣದಲ್ಲಿ ವಿಡಿಯೋ:
ತನಗೆ ಆದ ಅನ್ಯಾಯದ ಕುರಿತು ಪ್ರವೀಣ್ ಕುಮಾರ್ ಗುರುವಾರವೇ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಈ ವಿಡಿಯೋದಲ್ಲಿ ತನ್ನ ವ್ಯವಹಾರ ಹಾಗೂ ತನ್ನ ಮೇಲಾದ ಹಲ್ಲೆಯ ಮಾಹಿತಿ ಹಂಚಿಕೊಂಡಿರುವ ಪ್ರವೀಣ್ ಕುಮಾರ್, ಕಿರಣ್ ಗೌಡ, ಶ್ರೀನಿವಾಸ ಬಾಬು, ಹರೀಶ್, ಭಾಸ್ಕರ್ ನಾರಾಯಣಪ್ಪ,
ಮಧುಗೌಡ, ಭಾಗ್ಯ, ಮುನಿರಾಜು ಗೌಡ, ಸರವಣ ಎನ್ನುವವರ ಹೆಸರನ್ನು ಉಲ್ಲೇಖಿಸಿದ್ದಾನೆ. ಆತ್ಮಹತ್ಯೆಗೆ ಮುನ್ನ ಮರದ ಬಳಿ ನಿಂತಿದ್ದಾಗ ಬೀಟ್ ಪೊಲೀಸರು ಅನುಮಾನ ಬಂದು ವಿಚಾರಿಸಿದಾಗ ಹಸು ಖರೀದಿಗಾಗಿ ಹಗ್ಗ ಇರಿಸಿಕೊಂಡಿರುವುದಾಗಿ ತಿಳಿಸಿದ್ದ ಎನ್ನಲಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.