ಮದ್ದೂರಿನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕನ್ನ..!

| N/A | Published : Jul 23 2025, 03:13 AM IST / Updated: Jul 23 2025, 09:40 AM IST

annabhagya
ಮದ್ದೂರಿನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕನ್ನ..!
Share this Article
  • FB
  • TW
  • Linkdin
  • Email

ಸಾರಾಂಶ

ದುಷ್ಕರ್ಮಿಗಳ ಗುಂಪು ಮದ್ದೂರು ಪಟ್ಟಣದ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಗೋದಾಮಿನ ಬೀಗ ಮುರಿದು ಲಕ್ಷಾಂತರ ರು.ಮೌಲ್ಯದ ಪಡಿತರ ಅಕ್ಕಿ ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ಜರುಗಿದೆ.

 ಮದ್ದೂರು :  ದುಷ್ಕರ್ಮಿಗಳ ಗುಂಪು ಪಟ್ಟಣದ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಗೋದಾಮಿನ ಬೀಗ ಮುರಿದು ಲಕ್ಷಾಂತರ ರು.ಮೌಲ್ಯದ ಪಡಿತರ ಅಕ್ಕಿ ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಸೋಮವಾರ ಮಧ್ಯರಾತ್ರಿ ಜರುಗಿದೆ.

ಮಳವಳ್ಳಿ ರಸ್ತೆಯ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಪ್ರತಿಮೆ ಬಳಿ ಇರುವ ಆಹಾರ ನಾಗರೀಕ ಸರಬರಾಜು ನಿಗಮದ ಪಡಿತರ ಸಗಟು ದಾಸ್ತಾನು ಗೋದಾಮಿನಲ್ಲಿ ಈ ಕೃತ್ಯ ನಡೆಸಿರುವ ದುಷ್ಕರ್ಮಿಗಳು 1.64 ಲಕ್ಷ ರು. ಮೌಲ್ಯದ 54 ಕೆ.ಜಿ.ಸಾಮರ್ಥ್ಯದ 94 ಮೂಟೆ ಪಡಿತರ ಅಕ್ಕಿಯನ್ನು ಲೂಟಿ ಮಾಡಿ ಮಿನಿ ಲಾರಿ ವೊಂದರಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ.

ಮಧ್ಯರಾತ್ರಿ ವೇಳೆಗೆ ಮಾರಕಾಸ್ತ್ರಗಳ ಸಮೇತ ಲಾರಿಯಲ್ಲಿ ಬಂದ ದುಷ್ಕಮಿಗಳ ಗುಂಪು ಪಡಿತರ ಗೋದಾಮಿನ ರೋಲಿಂಗ್ ಷಟರ್‌ಗೆ ಹಾಕಲಾಗಿದ್ದ ಎರಡು ಬೀಗಗಳನ್ನು ಕಬ್ಬಿಣದ ಹಾರೆಯಿಂದ ಜಖಂಗೊಳಿಸಿದ ನಂತರ ಒಳ ನುಗ್ಗಿರುವ ದುಷ್ಕರ್ಮಿಗಳು ಪಡಿತರ ಅಕ್ಕಿ ಮೂಟೆಗಳನ್ನು ಲಾರಿಯಲ್ಲಿ ತುಂಬಿಕೊಂಡು ಸ್ಥಳದಿಂದ ಪಲಾಯನ ಮಾಡಿದ್ದಾರೆ.

ಟಿಎಪಿಸಿಎಂಎಸ್‌ಗೆ ಸೇರಿದ ಗೋದಾಮನ್ನು ಬಾಡಿಗೆ ಆಧಾರ ಮೇಲೆ ಪಡೆದುಕೊಂಡಿದ್ದ ಆಹಾರ ನಿಗಮ ಗೋದಾಮಿನಲ್ಲಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿಕೊಂಡು ತಾಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಗೋದಾಮಿನ ಹೊರಗೆ ಮತ್ತು ಒಳಗೆ ಯಾವುದೇ ಸಿಸಿಟಿವಿ ಅಥವಾ ಭದ್ರತಾ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿರುವ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ದೊಡ್ಡ ಲಾಂಗ್ ಮತ್ತು ಕಬ್ಬಿಣದ ರಾಡು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಆಹಾರ ನಿಗಮದ ಗೋದಾಮಿನ ಮ್ಯಾನೇಜರ್ ನಟರಾಜು ನೀಡಿದ ದೂರಿನ ಅನ್ವಯ ಅಪರಾಧ ವಿಭಾಗದ ಪೊಲೀಸರು ಪ್ರಕರಣ ದಾಖಲು ಮಾಡಿ ಕೊಂಡು ತನಿಖೆ ಕೈಗೊಂಡಿದ್ದಾರೆ.

ಮಂಡ್ಯ ಜಿಲ್ಲಾ ನಾಗರಿಕ ಮತ್ತು ಆಹಾರ ಸರಬರಾಜು ನಿಗಮದ ಜಂಟಿ ನಿರ್ದೇಶಕ ಕೃಷ್ಣಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Read more Articles on