ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಕ್ಷೇತ್ರದ ಶಾಸಕರ ಬಳಿಯೇ ಸಹಾಯ ಪಡೆದು ಬಾಂಬೆಗೆ ಹೋದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಶೋಷಿತ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸುರೇಶ್ ಕಂಠಿ ಪರೋಕ್ಷವಾಗಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅಂದಾನಿ ಸೋಮನಹಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನೀವು ದಲಿತ ಸಂಘಟನೆಯ ಸರ್ವೋಚ್ಛ ನಾಯಕರಾಗಿದ್ದೀರಿ. ಸಮಾಜ, ಸಮುದಾಯಕ್ಕಾಗಿ ಹೋರಾಟ ಮಾಡಲಿ. ಅದನ್ನು ಬಿಟ್ಟು ಕ್ಷೇತ್ರದ ಶಾಸಕರಾದ ಕೆ.ಎಂ.ಉದಯ್ ಬಗ್ಗೆ ಲಘುವಾಗಿ ಟೀಕಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಅನ್ಯ ಸಮುದಾಯ ಮತ್ತು ನಮ್ಮ ಸಮುದಾಯಗಳ ನಡುವೆ ಗಲಾಟೆಯಾದರೆ ದಲಿತರ ಮೇಲಿನ ದೌರ್ಜನ್ಯ ಹೆಸರಿನಲ್ಲಿ ಆ ವ್ಯಕ್ತಿಗೆ ಬೆದರಿಕೆ ಅವರ ಬಳಿಯೇ ರೋಲ್ ಕಾಲ್ ಕೇಳುತ್ತೀರಿ. ಶಾಸಕರನ್ನು ಜೂಜುಕೋರರು, ಗೂಂಡಾಗಳು, ಅಕ್ರಮ ಚಟುವಟಿಕೆಗಳಿಗೆ ಅಧಿಕಾರ ಬಳಕೆ ಎಂದು ಟೀಕಿಸುವ ನಿಮಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.ಪದೇ ಪದೇ ಶಾಸಕರ ವಿರುದ್ಧ ವೈಯಕ್ತಿಕ, ಇಲ್ಲಸಲ್ಲದ ಟೀಕೆ ಬಾರದು. ಕ್ಷೇತ್ರದ ಶಾಸಕರಾದ ನಂತರ ಕೆ.ಎಂ.ಉದಯ್ ಅವರು 1200 ಕೋಟಿ ರು. ತಂದು ಅಭಿವೃದ್ಧಿ ಪಡಿಸಿದ್ದಾರೆ. ಮದ್ದೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೇಗೇರಿಸಿ ಜಾಗಕ್ಕೆ ಮೌಲ್ಯ ಒದಗಿಸುತ್ತಿದ್ದಾರೆ. ಅಲ್ಲದೇ ಗ್ರಾಪಂಗಳು ನಗರಸಭೆಗೆ ಸೇರುವುದರಿಂದ ಹಲವು ಸೌಕರ್ಯಗಳು ಸಿಗುತ್ತವೆ ಎಂದರು.
ಕ್ಷೇತ್ರದಲ್ಲಿ ಇದುವರೆಗೂ ಅಧಿಕಾರ ನಡೆಸಿದವರು 76 ವರ್ಷ ಕಳೆದರೂ ನಗರಸಭೆಯನ್ನು ತರಲು ಸಾಧ್ಯವಾಗಿರಲಿಲ್ಲ. ಆದರೆ, ಶಾಸಕ ಕೆ.ಎಂ.ಉದಯ್ ಕ್ಷೇತ್ರದಲ್ಲಿ ಕೆಮ್ಮಣ್ಣು ನಾಲೆ ಅಭಿವೃದ್ಧಿ, ಟೌನ್ ವ್ಯಾಪ್ತಿ ರಸ್ತೆ ಅಗಲೀಕರಣ, ಕೆರೆಗಳ ಹೂಳೆತ್ತುವುದು, ನೀರು ತುಂಬಿಸುವುದು, ಗ್ರಾಮೀಣ ಜನರಿಗೆ ಕುಡಿಯುವ ನೀರು ಸೌಲಭ್ಯ, ರಸ್ತೆ, ಅಂಬೇಡ್ಕರ್ ಭವನಗಳ ನಿರ್ಮಾಣ, ಪರಿಶಿಷ್ಟ ಜಾತಿ, ವರ್ಗದ ಜನರ ವಾಸವಿರುವ ರಸ್ತೆಗಳ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.ಕ್ಷೇತ್ರದ 2 ಲಕ್ಷ ಜನ ಮತದಾರರು ಕೆ.ಎಂ.ಉದಯ್ ಅವರನ್ನು ಆಯ್ಕೆ ಮಾಡಿದ್ದಾರೆ. ಶಾಸಕರ ಬಗ್ಗೆ ವೈಯಕ್ತಿಕ ಟೀಕೆ ಮಾಡುವ ಮೊದಲು ದಾಖಲೆ ಸಮೇತ ನೀಡಿ. ಅನ್ಯಾಯ ಮಾಡಿದ್ದರೆ ತಿಳಿಸಿ ಅದು ಬಿಟ್ಟು ಕೆಲ ಕಿಡಿಗೇಡಿಗಳ ಮಾತು ಕೇಳಿ ಲಘು ಟೀಕೆ, ಸುಳ್ಳು ಹೇಳಿಕೆ ನೀಡಬಾರದು. ಇದೇ ರೀತಿ ವೈಯಕ್ತಿಕ ಟೀಕೆ ಮುಂದುವರೆದರೆ ಕಾನೂನು ವ್ಯಾಪ್ತಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ದಸಂಸ ಮುಖಂಡ ಚಿದಂಬರಮೂರ್ತಿ ಮಾತನಾಡಿ, ದಲಿತ ಮುಖಂಡ ಹೆಸರೇಳಿಕೊಂಡು ಅಟ್ರಾಸಿಟಿ ಕೇಸ್ ದಾಖಲಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿರುವವರು ನೀವು. ಗ್ರಾಪಂ ಸದಸ್ಯರಾಗಿ ದಲಿತ ಸಮುದಾಯ ಮನೆಗಳ ಹೆಸರಿನಲ್ಲಿ ಗೋಲ್ ಮಾಲ್ ಮಾಡಿರುವುದು ಇದೆ ಎಂದು ಪರೋಕ್ಷವಾಗಿ ಅಂದಾನಿ ಸೋಮನಹಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಯಾವುದೇ ವೃತ್ತಿ ಬದುಕನ್ನು ಪ್ರಾರಂಭಿಸಿದ ನಂತರ ತಮ್ಮ ಸಮಾಜ ಸೇವೆ ಮೂಲಕ ಉದಯ್ ಅವರು ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶ ಮಾಡಿದರು. ಶಾಸಕರಾದ 2 ವರ್ಷದ ಅವಧಿಯಲ್ಲಿ ಯಾವುದೇ ಸಂಘಟನೆ, ಸಮುದಾಯವನ್ನು ಟೀಕೆ ಮಾಡದೇ ಸರ್ವ, ಧರ್ಮವನ್ನು ಪ್ರೀತಿಸುತ್ತಾ ಎಲ್ಲಾ ಸಮುದಾಯ, ಶೋಷಿತ, ರೈತಾಪಿ ವರ್ಗಕ್ಕೆ ಸ್ಪಂದಿಸಿ ಕೆಲಸ ಮಾಡುತ್ತಿದ್ದಾರೆ. ಇವರ ಬಗ್ಗೆ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.
ಸುದ್ಧಿಗೋಷ್ಠಿಯಲ್ಲಿ ಭಾರತೀನಗರ ಪರಿಶಿಷ್ಟ ಜಾತಿ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮಿನ್ ಶಿವಲಿಂಗಯ್ಯ, ಉಪಾಧ್ಯಕ್ಷ ರಾಜೇಂದ್ರ, ಮುಖಂಡರಾದ ಮಡಿನಹಳ್ಳಿ ತಿಮ್ಮಯ್ಯ, ಅರುವನಹಳ್ಳಿ ಸಿದ್ದರಾಜು, ಪುರಸಭೆ ಮಾಜಿ ಸದಸ್ಯ ಮರಿದೇವರು ಇದ್ದರು.