ಭೂ ವಿವಾದ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ ಬೆನ್ನಲ್ಲೇ ಅನ್ನಪೂರ್ಣೇಶ್ವರಿ ನಗರ ಠಾಣೆಯಿಂದ ಇನ್‌ಸ್ಪೆಕ್ಟರ್‌ ಎ.ವಿ.ಕುಮಾರ್‌ ಅವರನ್ನು ನಗರ ಪೊಲೀಸ್ ಆಯುಕ್ತರು ಎತ್ತಂಗಡಿ ಮಾಡಿದ್ದಾರೆ.

 ಬೆಂಗಳೂರು : ಭೂ ವಿವಾದ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ ಬೆನ್ನಲ್ಲೇ ಅನ್ನಪೂರ್ಣೇಶ್ವರಿ ನಗರ ಠಾಣೆಯಿಂದ ಇನ್‌ಸ್ಪೆಕ್ಟರ್‌ ಎ.ವಿ.ಕುಮಾರ್‌ ಅವರನ್ನು ನಗರ ಪೊಲೀಸ್ ಆಯುಕ್ತರು ಎತ್ತಂಗಡಿ ಮಾಡಿದ್ದಾರೆ.

ನಗರ ವಿಶೇಷ ಶಾಖೆಗೆ ಕುಮಾರ್‌ ಅವರನ್ನು ಅಧಿಕೃತ ಕಚೇರಿ ಕೆಲಸದ (ಓಓಡಿ) ಮೇರೆಗೆ ಆಯುಕ್ತ ಬಿ.ದಯಾನಂದ್ ವರ್ಗಾಯಿಸಿದ್ದು, ಲೋಕಾಯುಕ್ತ ಪೊಲೀಸರು ವರದಿ ಆಧರಿಸಿ ಆರೋಪಿತ ಇನ್‌ಸ್ಪೆಕ್ಟರ್ ವಿರುದ್ಧ ಮುಂದಿನ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಅನ್ನಪೂಣೇಶ್ವರಿನಗರ ಠಾಣೆ ಹೊಣೆಗಾರಿಕೆಯನ್ನು ಪಶ್ಚಿಮ ವಿಭಾಗದ ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ರವಿಕುಮಾರ್ ಅವರಿಗೆ ಆಯುಕ್ತರು ವಹಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಭೂ ವಿವಾದದ ಪ್ರಕರಣ ಸಂಬಂಧ ಅನ್ನಪೂರ್ಣೇಶ್ವರಿ ಠಾಣೆ ಪಿಐ ಕುಮಾರ್ ಹಾಗೂ ಕಾನ್‌ಸ್ಟೇಬಲ್‌ ಉಮೇಶ್‌ ಸೇರಿದಂತೆ ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಮುಖ್ಯಮಂತ್ರಿ ಪದಕ ವಿತರಣಾ ಸಮಾರಂಭದ ಮುನ್ನ ದಿನ ಲೋಕಾಯುಕ್ತ ಪೊಲೀಸರು ದಾಳಿ ನಡೆದಾದ ಪ್ರಶಸ್ತಿ ಪುರಸ್ಕೃತರಾಗಿದ್ದ ಕುಮಾರ್ ತಲೆಮರೆಸಿಕೊಂಡಿದ್ದು ಇಲಾಖೆಗೆ ಭಾರಿ ಮುಜುಗರ ತಂದಿತ್ತು.

ಫೆಶಿಯಲ್ ಮಾಡಿಸಿಕೊಳ್ಳಲುಹೋಗಿ ಇನ್‌ಸ್ಪೆಕ್ಟರ್‌ ಬಚಾವ್‌

ಭೂ ವ್ಯಾಜ್ಯ ಪ್ರಕರಣದಲ್ಲಿ ಸಿಲುಕಿದ್ದ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್‌ಸ್ಪೆಕ್ಟರ್‌ ಕುಮಾರ್ ಅವರು ಲೋಕಾಯುಕ್ತ ದಾಳಿಯಿಂದ ತಪ್ಪಿಸಿಕೊಂಡ ಹಿಂದಿನ ಸ್ವಾರಸ್ವಕರ ಸಂಗತಿ ಬೆಳಕಿಗೆ ಬಂದಿದೆ.

ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿದ್ದ ಕುಮಾರ್ ಅವರು, ತಾವು ಪ್ರಶಸ್ತಿ ಸ್ವೀಕರಿಸುವ ಕಾರ್ಯಕ್ರಮಕ್ಕೆ ಟಾಕುಠೀಕಾಗಿ ಹೋಗಲು ಯೋಜಿಸಿದ್ದರು. ಅಂತೆಯೇ ತಮ್ಮ ಬ್ಯಾಚ್‌ಮೇಟ್‌ ಇನ್‌ಸ್ಪೆಕ್ಟರ್‌ ಜತೆ ಫೇಶಿಯಲ್ ಮಾಡಿಸಿಕೊಳ್ಳಲು ಸೆಲೂನ್‌ಗೆ ಹೋಗಲು ಏಪ್ರಿಲ್‌ 1ರ ಮಂಗಳವಾರ ಸಂಜೆ ಮುಂದಾಗಿದ್ದರು. ಇದಕ್ಕಾಗಿ ತಮ್ಮ ಫ್ಲ್ಟಾಟ್‌ಗೆ ಜೀಪಿನಲ್ಲಿ ಕುಮಾರ್ ಮರಳಿದ್ದರು. ಆದರೆ ಅದೇ ವೇಳೆ ಭೂ ವ್ಯಾಜ್ಯ ಪ್ರಕರಣದಲ್ಲಿ ಕುಮಾರ್ ಅವರನ್ನು ಗಾಳಕ್ಕೆ ಹಾಕಲು ಲೋಕಾಯುಕ್ತ ಪೊಲೀಸರು ಸಜ್ಜಾಗಿದ್ದರು. 

ಅಪಾರ್ಟ್‌ಮೆಂಟ್ ಹೊರಗೆ ಜೀಪು ನಿಲ್ಲಿಸಿ ಫ್ಲ್ಯಾಟ್‌ಗೆ ಕುಮಾರ್ ಹೋಗಿದ್ದಾರೆ. ಇತ್ತ ಹೊರಗೆ ನಿಂತ ಅವರ ಜೀಪಿನ ಮೇಲೆ ಕಣ್ಣಿಟ್ಟು ಆಪಾರ್ಟ್‌ಮೆಂಟ್‌ ಸಮೀಪ ಲೋಕಾಯುಕ್ತ ಪೊಲೀಸರು ಕಾಯುತ್ತಿದ್ದರು. ಆದರೆ ಫೇಶಿಯಲ್ ಮಾಡಿಸಿಕೊಳ್ಳಲು ಅದೇ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ತಮ್ಮ ಬ್ಯಾಚ್‌ಮೇಟ್‌ ಇನ್‌ಸ್ಪೆಕ್ಟರ್‌ ಜೀಪಿನಲ್ಲಿ ಕುಮಾರ್ ಹೊರಗೆ ಹೋಗಿದ್ದಾರೆ. ಬಹಳ ಹೊತ್ತಿನ ಬಳಿಕ ಕುಮಾರ್ ಅವರು ಬೇರೊಂದು ಜೀಪಿನಲ್ಲಿ ಹೋದ ಸಂಗತಿ ಲೋಕಾಯುಕ್ತ ಪೊಲೀಸರಿಗೆ ಗೊತ್ತಾಗಿದೆ. ಅಷ್ಟರಲ್ಲಿ ಲೋಕಾಯುಕ್ತ ದಾಳಿ ಮಾಹಿತಿ ಕಿವಿಗೆ ಬಿದ್ದು ಸೆಲೂನ್‌ನಿಂದಲೇ ಕುಮಾರ್ ಕಾಲ್ಕಿತ್ತಿದ್ದರು ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.