ಡ್ರಗ್ಸ್ ದಂಧೆ ವಿರುದ್ಧ ಪೊಲೀಸರ ಹಾಗೂ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದ್ದು, ರೌಡಿ ಸೇರಿದಂತೆ 11 ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಿ ಸುಮಾರು 33.27 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಡ್ರಗ್ಸ್ ದಂಧೆ ವಿರುದ್ಧ ಪೊಲೀಸರ ಹಾಗೂ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದ್ದು, ರೌಡಿ ಸೇರಿದಂತೆ 11 ಮಂದಿಯನ್ನು ಪ್ರತ್ಯೇಕವಾಗಿ ಬಂಧಿಸಿ ಸುಮಾರು 33.27 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ.ಯಾರಬ್ ನಗರದ ಸೈಯದ್ ಸುಹೈಲ್, ಆತನ ಸಂಬಂಧಿ ಮೊಹಮ್ಮದ್ ಸಮೀರ್, ಸಾದಿಕ್ ಪಾಷ, ಆರ್.ಟಿ.ನಗರದ ಅಜರುಲ್ ಹಕ್, ಎಲೆಕ್ಟ್ರಾನಿಕ್ ಸಿಟಿಯ ಕೆ.ವಿ.ಸೌಗೇಶ್, ಸಿ.ಎಚ್.ಅಲ್ತಾಫ್ ಹಾಗೂ ಐವರು ಬ್ಯಾಂಕಾಕ್ ಪ್ರಜೆಗಳು ಸಿಕ್ಕಿಬಿದ್ದಿದ್ದು, ಆರೋಪಿಗಳಿಂದ ಪ್ರತ್ಯೇಕವಾಗಿ ಕೆಜಿಗಟ್ಟಲೇ ಎಂಡಿಎಂಎ ಹಾಗೂ ಹೈಡ್ರೋ ಗಾಂಜಾ ಜಪ್ತಿಯಾಗಿದೆ.
ಗುಂಡೇಟು ತಿಂದ್ರು ಬುದ್ಧಿ ಕಲಿಯದ ರೌಡಿ:ನಗರದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ರೌಡಿ ಸೈಯದ್ ಹಾಗೂ ಆತನ ಸೋದರ ಸಂಬಂಧಿಗಳನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 9.74 ಕೋಟಿ ರು ಮೌಲ್ಯದ 4.978 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿಗೆ ಯಶವಂತಪುರ ಸಮೀಪ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ರೌಡಿ ತಂಡ ಸಿಕ್ಕಿಬಿದ್ದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಸೈಯದ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಕೋಲಾರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಸೈಯದ್ ಹಾವಳಿ ಇದೆ. ಈ ಕ್ರಿಮಿನಲ್ ಚಟುವಟಿಕೆ ಹಿನ್ನಲೆಯಲ್ಲಿ ಆತನ ಮೇಲೆ ಹೊಸಕೋಟೆ ಪೊಲೀಸರು ರೌಡಿಪಟ್ಟಿ ತೆರೆದಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಆತನನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಒಂದು ಬಾರಿಗೆ ಆತನಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದರು. ಆದರೆ ಜಾಮೀನು ಪಡೆದು ಹೊರಬಂದು ಸೈಯದ್ ಮತ್ತೆ ದಂಧೆಗಿಳಿದಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.ನೈಜೀರಿಯಾ ಡ್ರಗ್ಸ್ ದಂಧೆಕೋರರ ಸೂಚನೆ ಮೇರೆಗೆ ಸೈಯದ್ ತಂಡ ಕಾರ್ಯನಿರ್ವಹಿಸುತ್ತಿತ್ತು. ವಿದೇಶಿ ಪೆಡ್ಲರ್‌ಗಳಿಂದ ಕೆಜಿ ಗಟ್ಟಲೇ ಡ್ರಗ್ಸ್ ಪಡೆದು ಬಳಿಕ ಸಣ್ಣಸಣ್ಣ ಪೊಟ್ಟಣಗಳಲ್ಲಿ ತುಂಬಿ ಗ್ರಾಹಕರಿಗೆ ಪೂರೈಸುತ್ತಿದ್ದರು. ಸೈಯದ್ ತಂಡಕ್ಕೆ ನೈಜೀರಿಯಾ ಪೆಡ್ಲರ್‌ಗಳು ನಿಗದಿತ ಸ್ಥಳಕ್ಕೆ ಲೋಕೇಷನ್ ಕಳುಹಿಸಿದ್ದರು. ಆ ಸ್ಥಳಕ್ಕೆ ತೆರಳಿ ಗ್ರಾಹಕರಿಗೆ ಆರೋಪಿಗಳು ಡ್ರಗ್ಸ್ ಪೂರೈಸಿ ಬರುತ್ತಿದ್ದರು. ಈ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ಮತ್ತೆ ಕೆಲವರ ಬಂಧನಕ್ಕೆ ಖಾಕಿ ತನಿಖೆ ನಡೆದಿದೆ.
ಇದೇ ರೀತಿ ದಂಧೆ ನಡೆಸುತ್ತಿದ್ದ ಮತ್ತೊಬ್ಬ ಯಶವಂತಪುರ ಪೊಲೀಸರಿಗೆ ಸೆರೆಯಾಗಿದ್ದಾನೆ. ಆರ್.ಟಿ.ನಗರದ ಮೊಹಮ್ಮದ್ ಅಜರುಲ್ ಹಕ್ ಬಂಧಿತನಾಗಿದ್ದು, ಆರೋಪಿಯಿಂದ 6.36 ಕೋಟಿ ರು ಮೌಲ್ಯದ 3 ಕೆ.ಜಿ 180 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದೆ. ಈತ ಸಹ ನೈಜೀರಿಯಾ ಪ್ರಜೆಗಳ ಸೂಚನೆ ಮೇರೆಗೆ ದಂಧೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಒಳಾಂಗಣ ವಿನ್ಯಾಸಗಾರ ಸೆರೆ:ನಂದಿನಿ ಲೇಔಟ್ ಠಾಣೆ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಒಳಾಂಗಣ ವಿನ್ಯಾಸಗಾರ ಸೇರಿದಂತೆ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಕೇರಳ ಮೂಲದ ಕೆ.ವಿ ಸೌಗೇಶ್ ಹಾಗೂ ಅಲ್ತಾಫ್ ಬಂಧಿತರಾಗಿದ್ದು, 4 ಕೋಟಿ ರು. ಮೌಲ್ಯದ 5.7 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ. ನಗರದಲ್ಲಿ ಒಳಾಂಗಣ ವಿನ್ಯಾಸಕಾರನಾಗಿ ನಾಗೇಶ್ ಹಾಗೂ ಕ್ಯಾಬ್ ಚಾಲಕನಾಗಿ ಅಲ್ತಾಪ್ ಕೆಲಸ ಮಾಡುತ್ತಿದ್ದರು. ಎಲೆಕ್ಟ್ರಾನಿಕ್ ಸಿಟಿ ಸಮೀಪ ಆರೋಪಿಗಳು ನೆಲೆಸಿದ್ದರು. ಮೋಜು ಮಸ್ತಿ ಜೀವನಕ್ಕೆ ಡ್ರಗ್ಸ್ ದಂಧೆಯಲ್ಲಿ ಆರೋಪಿಗಳು ತೊಡಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಆರು ಮಂದಿ ಪೆಡ್ಲರ್‌ಗಳನ್ನು ಉತ್ತರ ವಿಭಾಗದ ಡಿಸಿಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಯಶವಂತಪುರ ಉಪ ವಿಭಾಗದ ಎಸಿಪಿ ಮೇರಿ ಶೈಲಜಾ ನೇತೃತ್ವದಲ್ಲಿ ಯಶವಂತಪುರ ಠಾಣೆ ಇನ್ಸ್‌ಪೆಕ್ಟರ್ ಎಸ್.ಮಂಜುನಾಥ್ ಹಾಗೂ ನಂದಿನಿಲೇಔಟ್ ಠಾಣೆಯ ಇನ್ಸ್‌ಪೆಕ್ಟರ್ ಆರ್.ಎಲ್.ಗಣಪತಿ ನೇತೃತ್ವದ ತಂಡ ಬಂಧಿಸಿದೆ.
5 ಬ್ಯಾಂಕಾಕ್ ಪ್ರಜೆಗಳ ಬಳಿ ₹13 ಕೋಟಿ ಡ್ರಗ್ಸ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ಐವರು ಬ್ಯಾಂಕಾಕ್ ಪ್ರಜೆಗಳನ್ನು ಬಂಧಿಸಿ 13.17 ಕೋಟಿ ರು ಮೌಲ್ಯದ ಡ್ರಗ್ಸ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಿದೇಶದಿಂದ ಕಳ್ಳ ಸಾಗಾಣಿಕೆ ಮೂಲಕ ನಾಡಿಗೆ ಡ್ರಗ್ಸ್ ಸಾಗಾಣಿಕೆಗೆ ಆರೋಪಿಗಳು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಕಸ್ಟಮ್ಸ್ ಕಾರ್ಯಾಚರಣೆ ನಡೆಸಿದೆ. ಕೆಐಎಗೆ ಪ್ರತ್ಯೇಕವಾಗಿ ಸೋಮವಾರ ರಾತ್ರಿ ಪ್ರವಾಸಿಗರು ಬಂದಿಳಿದರು. ಒಬ್ಬಾತನಿಂದ 1.11 ಕೋಟಿ ರು ಮೌಲ್ಯದ 3.18 ಕೆಜಿ, ಇಬ್ಬರಿಂದ 9.31 ಕೋಟಿ ರು ಮೌಲ್ಯದ 26.62 ಕೆಜಿ ಹಾಗೂ ಮತ್ತಿಬ್ಬರಿಂದ 2.75 ಕೋಟಿ ರು ಬೆಲೆಯ 7.86 ಕೆಜಿ ಸೇರಿದಂತೆ ಒಟ್ಟು 13.17 ಕೋಟಿ ರು ಮೌಲ್ಯದ 37.66 ಕೆಜಿ ಹೈಡ್ರೋ ಗಾಂಜಾ ಜಪ್ತಿಯಾಗಿದೆ ಎಂದು ಕಸ್ಟಮ್ಸ್ ಹೇಳಿದೆ.