ಸಾರಾಂಶ
ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಿಂಬದಿಯ ವಸತಿ ಗೃಹದಲ್ಲಿ ಇತ್ತೀಚೆಗೆ ನಡೆದಿದ್ದ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪಾಂಡವಪುರ : ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಿಂಬದಿಯ ವಸತಿ ಗೃಹದಲ್ಲಿ ಇತ್ತೀಚೆಗೆ ನಡೆದಿದ್ದ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಹಿರೇಮರಳಿ ಗ್ರಾಮದ ಸಿಂಗೇಗೌಡರ ಪುತ್ರ ಉಮೇಶ್ ಬಂಧಿತ ಆರೋಪಿ.
ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಅಭಿಲಾಷ್ ಸೋದರ ಮಾವನಾಗಿರುವ ಈತ ಹೆಣ್ಣುಭ್ರೂಣ ಹತ್ಯೆಗೆ ಬಯಸುವ ಗರ್ಭಿಣಿಯರನ್ನು ಪ್ರಕರಣದಲ್ಲಿ ಈಗಾಗಲೇ ಜೈಲು ಸೇರಿರುವ ಶೃತಿ ಮತ್ತು ಆಶಾ (ಆರೋಪಿಗಳು) ಅವರಿಗೆ ಪರಿಚಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ದೇವೇಗೌಡನಕೊಪ್ಪಲು ಗ್ರಾಮದ ಮಹಿಳೆಗೆ ತಮ್ಮ ಮನೆ ಕೊಠಡಿಯಲ್ಲಿ ಭ್ರೂಣ ಹತ್ಯೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದು, ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಿದ್ದ ಸಬ್‌ಇನ್ಸ್‌ಪೆಕ್ಟರ್ ಆರ್.ಬಿ.ಉಮೇಶ್ ಅವರ ತಂಡ ಆರೋಪಿಯನ್ನು ಅವರ ಸ್ವತಃ ಮನೆಯಲ್ಲೇ ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಭ್ರೂಣಹತ್ಯೆ ಪ್ರಕರಣಗಳು ಹೆಚ್ಚಳ
ಭಾರತೀನಗರ: ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಹೆಣ್ಣಿಗೆ ಹೆಣ್ಣೇ ಶತ್ರುವಾಗುತ್ತಿದ್ದಾರೆ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ ಆತಂಕ ವ್ಯಕ್ತಪಡಿಸಿದರು. ಅಂಬೇಡ್ಕರ್ ಭವನದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ನಡೆದ ಸಭೆಯಲ್ಲಿ ಮಾತನಾಡಿ, ಹೆಣ್ಣು ಭ್ರೂಣಹತ್ಯೆ ವಿರೋಧಿಸಿ ಜಿಲ್ಲಾ ಮಟ್ಟದ ಆಂದೋಲನವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಹೆಣ್ಣು ಭ್ರೂಣಹತ್ಯೆಯಿಂದ ಹೆಣ್ಣಿನ ಸಂತತಿ ಬಹಳಷ್ಟು ಕುಸಿಯುತ್ತಿದೆ. ಹೆಣ್ಣು ಹೆಣ್ಣಿಗೆ ಶತ್ರುವಾಗಬಾರದು. ಹೆಣ್ಣನ್ನು ಗೌರವಿಸುವ ದೇಶ ಭಾರತ. ಹೆಣ್ಣು ಭ್ರೂಣಹತ್ಯೆ ನಿಲ್ಲುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸಬಾರದೆಂದು ತಿಳಿಸಿದರು. ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ರಾಜ್ಯ ಉಪಾಧ್ಯಕ್ಷೆ ಗೌರಮ್ಮ, ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ, ಜಿಲ್ಲಾ ಕಾರ್ಯದರ್ಶಿ ಸುಶೀಲ, ಜಿಲ್ಲಾಖಜಾಂಚಿ ರಾಣಿ, ಉಪಾಧ್ಯಕ್ಷೆ ಶೋಭಾ, ಜಯಮ್ಮ, ವರದೇವಿ, ಪುಟ್ಟಲಕ್ಷ್ಮಮ್ಮ, ಶಿವಮ್ಮ ಸೇರಿ ಹಲವರಿದ್ದರು.
ಹಾವು ಕಚ್ಚಿ ರೈತ ಸಾವು
ಭಾರತೀನಗರ: ಹಾವು ಕಚ್ಚಿ ರೈತ ಸಾವನ್ನಪ್ಪಿರುವ ಘಟನೆ ಸಮೀಪದ ಗುರುದೇವರಹಳ್ಳಿಯಲ್ಲಿ ಜರುಗಿದೆ. ಗ್ರಾಮದ 60 ವರ್ಷದ ಮಹದೇವು ಸಾವನ್ನಪ್ಪಿರುವ ದುರ್ದೈವಿ. ಗ್ರಾಮದ ಹೊರ ವಲಯದ ತಮ್ಮ ಜಮೀನಿನಲ್ಲಿ ಜಾನುವಾರುಗಳಿಗೆ ಹುಲ್ಲು ತರಲು ಹೋದ ವೇಳೆ ನಾಗರಹಾವು ಕಚ್ಚಿದೆ. ಇದರಿಂದ ಗಾಬರಿಗೊಂಡು ಓಡಲು ಪ್ರಾರಂಭಿಸಿದಾಗ ತಕ್ಷಣ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮೃತರ ಅಂತ್ಯಸಂಸ್ಕಾರ ಸ್ವಗ್ರಾಮದ ಗುರುದೇವರಹಳ್ಳಿಯ ತಮ್ಮ ಜಮೀನಿನಲ್ಲಿ ನೆರವೇರಿದೆ.