ಬೆಂಗಳೂರು: ಮತ್ತೊಂದು ಸಹಕಾರಿ ಬ್ಯಾಂಕಲ್ಲಿ ಅವ್ಯವಹಾರ: ತನಿಖೆ

| Published : Mar 24 2024, 01:32 AM IST / Updated: Mar 24 2024, 08:46 AM IST

ಸಾರಾಂಶ

ನಗರದ ನಾಗಪುರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಅವ್ಯವಹಾರ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಿಸಿ ಸಹಕಾರ ಸಂಘಗಳ ಜಂಟಿ ನಿಬಂಧಕರು ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ನಾಗಪುರ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯಲ್ಲಿ ಅವ್ಯವಹಾರ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನು ನೇಮಿಸಿ ಸಹಕಾರ ಸಂಘಗಳ ಜಂಟಿ ನಿಬಂಧಕರು ಆದೇಶ ಹೊರಡಿಸಿದ್ದಾರೆ.

ಎರಡು ತಿಂಗಳಲ್ಲಿ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿ, ಮಾ.15ರಂದು ಆದೇಶಿಸಲಾಗಿದೆ. ಸೊಸೈಟಿಯ ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಇತರೆ ಸಿಬ್ಬಂದಿಯಿಂದ ಸಾಲ ಮತ್ತು ವಸೂಲಾತಿಯಲ್ಲಿ ಅವ್ಯವಹಾರ, ಹಣ ದುರುಪಯೋಗ, ನಗದು ಅವ್ಯವಹಾರ, ಚೆಕ್ ಡಿಸ್ಕೌಂಟ್, ಸ್ಥಿರಾಸ್ತಿ ಸಾಲ ನೀಡುವಾಗ ಸಂಘಕ್ಕೆ ಅಡಮಾನ ಮಾಡಿಕೊಳ್ಳದೇ ಇರುವುದು ಮತ್ತು ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ನೀಡದೆ ಹಣಕಾಸು ವ್ಯವಹಾರ ಕೈಗೊಳ್ಳಲಾಗಿದೆ ಎಂಬ ಆರೋಪಗಳು ಬಂದಿವೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಸಿಬ್ಬಂದಿ ನೇಮಕ, ಖರೀದಿ ಮತ್ತಿತರ ಚಟುವಟಿಕೆಗಳಿಗೆ ಪಾರದರ್ಶಕವಾಗಿ ಟೆಂಡರ್ ಕರೆಯದಿರುವುದು, ಎನ್‌ಪಿಇ ಇದ್ದು ಬ್ಯಾಂಕಿನ ಆರ್ಥಿಕ ಸ್ಥಿತಿ ಸುಸ್ಥಿರವಾಗಿಲ್ಲ. 

ಸಂಘದ ವಿರುದ್ಧ ಹಲವು ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 64ರ ಅಡಿ ವಿಚಾರಣೆ ನಡೆಸುವುದು ಸೂಕ್ತ ಎಂದು ಜಂಟಿ ನಿಬಂಧಕರು ಅಭಿಪ್ರಾಯಪಟ್ಟಿದ್ದಾರೆ.

ಅವ್ಯವಹಾರದ ಬಗ್ಗೆ ಸೂಕ್ತ ವಿಚಾರಣೆ ನಡೆಸಲು ಸಹಕಾರ ಸಂಘಗಳು ಬೆಂಗಳೂರು ನಗರ ಜಿಲ್ಲೆ 1ನೇ ವಲಯದ ಸಹಾಯಕ ನಿಬಂಧಕರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿದೆ. ಸೊಸೈಟಿಯ ಸದಸ್ಯರಾದ ಈಶ್ವರಪ್ಪ ಹಾಗೂ ಸಿಬ್ಬಂದಿಯವರು ಅವ್ಯವಹಾರದ ಬಗ್ಗೆ ದೂರು ಸಲ್ಲಿಸಿದ್ದರು.

3 ಶಾಖೆಗಳನ್ನು ಹೊಂದಿರುವ ಸೊಸೈಟಿಯಲ್ಲಿ ಸುಮಾರು 9 ಸಾವಿರ ಸದಸ್ಯರಿದ್ದಾರೆ. ವೃದ್ಧರು ಸೇರಿದಂತೆ ಅನೇಕರು ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದು, ಅದರಿಂದ ಬರುವ ಬಡ್ಡಿ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ಅವ್ಯವಹಾರದ ಕುರಿತು ಸೂಕ್ತ ವಿಚಾರಣೆ ನಡೆಸಬೇಕು ಎಂದು ಸೊಸೈಟಿ ಸದಸ್ಯರಾದ ಬಿ.ಎಚ್.ಸುರೇಶ್ ಹೇಳಿದರು.