ಸಾರಾಂಶ
ಬೆಂಗಳೂರು : ಇತ್ತೀಚೆಗಷ್ಟೆ ನಗರದ ವಿವಿಧೆಡೆ ಬಿಬಿಎಂಪಿ ಕಚೇರಿಗಳಿಗೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ದಿಢೀರ್ ಕಾರ್ಯಾಚರಣೆ ಕೈಗೊಂಡು ಹಲವು ಲೋಪದೋಷಗಳನ್ನು ಬಯಲಿಗೆಳೆದ ಬೆನ್ನಲ್ಲೇ ಮತ್ತೆ ಬಿಬಿಎಂಪಿ ಕಚೇರಿಗಳ ನ್ಯೂನತೆಗಳು ಬಹಿರಂಗಗೊಂಡಿವೆ.
ಗುರುವಾರ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ನೇತೃತ್ವದಲ್ಲಿ 12 ತಂಡಗಳು ಮತ್ತೆ ಬಿಬಿಎಂಪಿ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದವು. ವಿಜಯನಗರ, ವಸಂತನಗರ, ಗಾಂಧಿನಗರ, ಶಿವಾಜಿನಗರ, ಗೋವಿಂದರಾಜನಗರ ಕಂದಾಯ ಅಧಿಕಾರಿಗಳ ಮತ್ತು ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳಿಗೆ ಭೇಟಿ ನೀಡಿ ಬಿಬಿಎಂಪಿ ಸಿಬ್ಬಂದಿಯ ಕಾರ್ಯವೈಖರಿಯನ್ನು ಪರಿಶೀಲನೆ ನಡೆಸಲಾಯಿತು. ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ನ್ಯಾ.ಕೆ.ಎನ್.ಫಣೀಂದ್ರ ಗರಂ ಆದರು.
ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಇತ್ತೀಚೆಗೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ವೇಳೆ ಹಲವು ಲೋಪದೋಷಗಳು ಕಂಡು ಬಂದಿದ್ದು, ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.