ಸಾರಾಂಶ
ಕಿಕ್ಕೇರಿ : ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊರ್ವ ವ್ಯಕ್ತಿ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾರೆ.
ಆನೆಗೊಳ ಗ್ರಾಮದ ಮಂಜೇಗೌಡರ ಪುತ್ರ ದಿನೇಶ್(38) ಮೃತಪಟ್ಟವರು. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತರಾದರು.
ಮೃತರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಮೃತ ದಿನೇಶ್ ಗ್ರಾಮದಲ್ಲಿ ಸಣ್ಣದಾಗಿ ಪ್ರಾವಿಷನ್ ಸ್ಟೋರ್ ಇಟ್ಟುಕೊಂಡು ಬದುಕು ಕಟ್ಟಿಕೊಂಡಿದ್ದರು. ಕಳೆದ ವಾರ ಆನೆಗೊಳ ಗ್ರಾಮದಿಂದ ಬಿ.ಸಿ.ಸುರೇಶ್, ಕುಮಾರ್, ದಿನೇಶ್ ಹಾಗೂ ಅಶ್ವಥ್ ಅವರು ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಹಾಸನ ಬಳಿ ಖಾಸಗಿ ಬಸ್ ಡಿಕ್ಕಿಯಾಗಿ ಬಿ.ಸಿ.ಸುರೇಶ್, ಕುಮಾರ್ ಮೃತರಾಗಿದ್ದರು. ಅಶ್ವಥ್ ಪಾರಾಗಿದ್ದರು. ದಿನೇಶ್ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಮೃತ ದಿನೇಶ್ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮದ ತೋಟದಲ್ಲಿ ನೆರವೇರಿತು.
ಅಪರಿಚಿತ ವ್ಯಕ್ತಿ ಸಾವು
ಹಲಗೂರು: ಕನಕಪುರ ರಸ್ತೆಯ ಬಾರ್ ಬಳಿ ಸುಮಾರು 35ರಿಂದ 40 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ವ್ಯಕ್ತಿಯು 5 ಅಡಿ 2 ಇಂಚು ಎತ್ತರ, ಸಾಧರಾಣ ಶರೀರ, ಕಪ್ಪು ಮೈ ಬಣ್ಣ, ಕಪ್ಪು ಕೂದಲು, ಕಪ್ಪು ಕುರುಚಲು ಗಡ್ಡ ಮೀಸೆ ಬಿಟ್ಟಿದ್ದಾನೆ. ದೇಹದ ಮೇಲೆ ಹಸಿರು, ಕಪ್ಪು, ಕೆಂಪು ಅರ್ಧ ತೋಳಿನ ಷರ್ಟ್ ಹಾಗೂ ಖಾಕಿ ಬಣ್ಣದ ಪ್ಯಾಂಟ್, ಒಂದು ಚಪ್ಪಲಿ ಧರಿಸಿರುವ ಅಪರಿಚಿತ ವ್ಯಕ್ತಿ ವಾರಸುದಾರರು ಯಾರಾದರೂ ಇದ್ದಲ್ಲಿ ಪಿ.ಎಸ್.ಐ ಹಲಗೂರು ಪೊಲೀಸ್ ಠಾಣೆ ಮೊ-9480804866ಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ವ್ಯಕ್ತಿ ಮೃತ ದೇಹವನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿಸಲಾಗಿದೆ.