ಮಹಿಳಾ ಸ್ವಾವಲಂಬನೆಗೆ ಧರ್ಮಸ್ಥಳ ಸಂಸ್ಥೆ ನೆರವು ಶ್ಲಾಘನೀಯ

| Published : Mar 04 2025, 12:36 AM IST

ಸಾರಾಂಶ

ಶ್ರೀ ಧರ್ಮಸ್ಥಳ ಯೋಜನೆಯಿಂದಾಗಿ ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಜಗಳೂರಲ್ಲಿ ಹೇಳಿದ್ದಾರೆ.

- ನವಜೀವನ ಸಮಿತಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಶಾಸಕ ದೇವೇಂದ್ರಪ್ಪ ಹೇಳಿಕೆ - - - ಕನ್ನಡಪ್ರಭ ವಾರ್ತೆ ಜಗಳೂರು

ಶ್ರೀ ಧರ್ಮಸ್ಥಳ ಯೋಜನೆಯಿಂದಾಗಿ ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಹೊರಕೆರೆಯಲ್ಲಿರುವ ದೊಡ್ಡ ಮಾರಮ್ಮ ದೇವಾಲಯ ಆವರಣದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಜಗಳೂರು ಜಿಲ್ಲಾ ವ್ಯಾಪ್ತಿ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ವತಿಯಿಂದ ಜಾಗೃತಿ ಕಾರ್ಯಕ್ರಮ ಮತ್ತು ನವಜೀವನ ಸಮಿತಿ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮದ್ಯಸೇವನೆಗೆ ದಾಸರಾಗಿರುವವರು ಹೆಂಡತಿ, ಮಕ್ಕಳು ಸೇರಿದಂತೆ ಕುಟುಂಬವನ್ನು ಮರೆತು ಅಮಲಿನ ಲೋಕದಲ್ಲಿದ್ದರು. ಮದ್ಯವರ್ಜನೆ ಶಿಬಿರದ ಪ್ರಯೋಜನ ಪಡೆದು ಈಗ ಮದ್ಯವ್ಯಸನದಿಂದ ಹೊರಬಂದು ಅಮೂಲ್ಯ ಜೀವವನ್ನು ಉಳಿಸಿಕೊಂಡು, ಸಾವನ್ನು ಗೆದ್ದು ಮೃತ್ಯುಂಜಯರಾಗಿದ್ದಾರೆ ಎಂದರು.

ಜನಜಾಗೃತಿ ಸಮಿತಿ ತಾಲೂಕು ಸಂಚಾಲಕ ನಾಗರಾಜ್ ಮಾತನಾಡಿ, ಯೋಜನೆಯು ಗ್ರಾಮಗಳ ಅಭಿವೃದ್ಧಿ ಮಾಡುವ ಸಲುವಾಗಿ ಮತ್ತು ಸ್ವಾವಲಂಬಿ ಜೀವನ ನಡೆಸುವ ಸಲುವಾಗಿ ೧೯೮೨ರಲ್ಲಿ ಬೆಳ್ತಂಗಡಿಯಲ್ಲಿ ಪ್ರಾರಂಭಿಸಲಾಯಿತು. ೧೦ ವರ್ಷಗಳ ನಂತರ ರಾಜ್ಯದ ಪ್ರತಿ ಗ್ರಾಮಗಳಲ್ಲಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ, ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜೊತೆಗೆ ವಿದ್ಯಾರ್ಥಿ ವೇತನ, ವೃದ್ದರಿಗೆ ಮಾಶಾಸನ, ಮನೆ ಇಲ್ಲದವರಿಗೆ ಮನೆ ರಿಪೇರಿ ಮತ್ತು ಮನೆ ನಿರ್ಮಿಸಿಕೊಡುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತ ಸಂಘ ತಾಲೂಕು ಅಧ್ಯಕ್ಷ ಜಿ.ಎಸ್.ಚಿದಾನಂದ ಮಾತನಾಡಿ, ಸುಮಾರು ನೂರು ಜನರು ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ್ದರು. ಅದರಲ್ಲಿ 40 ಜನ ಮದ್ಯ ಸೇವನೆ ತ್ಯಜಿಸಿದ್ದಾರೆ. ನವಜೀವನ ರೂಪಿಸಿಕೊಂಡು, ಆರೋಗ್ಯ ಕಾಪಾಡಿಕೊಳ್ಳುವ ಕಡೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಇಬ್ಬರು ಚಾಲಕರಿಗೆ 2 ಆಟೋ ರಿಕ್ಷಾಗಳನ್ನು ವಿತರಣೆ ಮಾಡಲಾಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಡಾ. ಪಿ.ಎಸ್. ಅರವಿಂದ್ , ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಲೋಕಮ್ಮ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಶಿವನಗೌಡ, ಜನಜಾಗೃತಿ ಸಮಿತಿ ಸದಸ್ಯರಾದ ತಿಪ್ಪೇಸ್ವಾಮಿ, ಕಿಲಾರಿ ಕೃಷ್ಣ ಮೂರ್ತಿ, ಕರಿಬಸವಯ್ಯ, ಮಲ್ಲಿಕಾರ್ಜುನ, ಪ್ರೇರಣ ಸಮಾಜ ಸೇವಾ ಸಂಸ್ಥೆ ನಿದೇರ್ಶಕರಾದ ಫಾದರ್ ರೊನಾಲ್ಡ್ ಪಿಂಟೋ, ರೈತ ಮುಖಂಡ ಪರಶುರಾಮ, ತಾಲೂಕು ಯೋಜನಾಧಿಕಾರಿ ಗಣೇಶ್ ನಾಯ್ಕ, ಮಂಜುನಾಥ್, ಗೌಸ್ ಪೀರ್, ಸೋಮಣ್ಣ ಮತ್ತಿತರರು ಹಾಜರಿದ್ದರು.

- - - -03ಜೆ.ಜಿ.ಎಲ್.1.ಕೆಪಿಜಿ: ನವಜೀವನ ಸಮಿತಿ ಸಮಾವೇಶ ಕಾರ್ಯಕ್ರಮವನ್ನು ಶಾಸಕ ಬಿ.ದೇವೇಂದ್ರಪ್ಪ ಉದ್ಘಾಟಿಸಿದರು.