ಡ್ರಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆ ವೇಳೆ ಬೈಕ್‌ ಸೀಜ್‌ ಮಾಡಿದ ಮಹಿಳಾ ಇನ್‌ಸ್ಪೆಕ್ಟರ್‌ಗೆ ಥಳಿಸಿದವರ ಸೆರೆ

| N/A | Published : Mar 17 2025, 12:30 AM IST / Updated: Mar 17 2025, 05:27 AM IST

ಡ್ರಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆ ವೇಳೆ ಬೈಕ್‌ ಸೀಜ್‌ ಮಾಡಿದ ಮಹಿಳಾ ಇನ್‌ಸ್ಪೆಕ್ಟರ್‌ಗೆ ಥಳಿಸಿದವರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಡ್ರಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆ ವೇಳೆ ಕರ್ತವ್ಯ ನಿರತ ಮಹಿಳಾ ಇನ್‌ಸ್ಪೆಕ್ಟರ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ ಆರೋಪದಡಿ ಇಬ್ಬರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಡ್ರಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆ ವೇಳೆ ಕರ್ತವ್ಯ ನಿರತ ಮಹಿಳಾ ಇನ್‌ಸ್ಪೆಕ್ಟರ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ ಆರೋಪದಡಿ ಇಬ್ಬರನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿ.ನಾರಾಯಣಪುರ ನಿವಾಸಿ ರಾಕೇಶ್ ಕುಮಾರ್ (35) ಮತ್ತು ಆತನ ಸ್ನೇಹಿತೆ ಬೈಸಾಕಿ (30) ಬಂಧಿತರು. ಶನಿವಾರ ಮಧ್ಯರಾತ್ರಿ ಸುಮಾರು 12ಕ್ಕೆ ಸಿಂಗನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಈ ಸಂಬಂಧ ಮಹದೇವಪುರ ಸಂಚಾರ ಪೊಲೀಸ್‌ ಠಾಣೆಯ ಮಹಿಳಾ ಇನ್‌ಸ್ಪೆಕ್ಟರ್‌ ಅನಿತಾ ಕುಮಾರಿ ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ.

ಘಟನೆ ವಿವರ:

ಮಹದೇವಪುರ ಸಂಚಾರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಅನಿತಾ ಕುಮಾರಿ ಹಾಗೂ ಸಿಬ್ಬಂದಿ ಶನಿವಾರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಸಿಂಗನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಡ್ರಂಕ್‌ ಆ್ಯಂಡ್‌ ಡ್ರೈವ್‌ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ರಾಮಮೂರ್ತಿನಗರ ಕಡೆಯಿಂದ ಸಿಂಗನಪಾಳ್ಯ ಕಡೆಗೆ ಬರುತ್ತಿದ್ದ ದ್ವಿಚಕ್ರ ತಡೆದು ವಾಹನ ಸವಾರ ರಾಕೇಶ್‌ ಕುಮಾರ್‌ಗೆ ಆಲ್ಕೋ ಮೀಟರ್‌ ಇರಿಸಿ ತಪಾಸಣೆ ಮಾಡಿದಾಗ ಆತ ಮದ್ಯ ಸೇವಿಸಿರುವುದು ಪತ್ತೆಯಾಗಿದೆ. ಹೀಗಾಗಿ ದ್ವಿಚಕ್ರ ವಾಹನ ಜಪ್ತಿ ಮಾಡಿ ಆತನ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ. ದಂಡ ಪಾವತಿಸಿ ದ್ವಿಚಕ್ರ ವಾಹನ ಬಿಡಿಸಿಕೊಂಡು ಹೋಗುವಂತೆ ಸೂಚಿಸಿದ್ದಾರೆ.

ಇಬ್ಬರಿಂದಲೂ ನಿಂದನೆ, ಹಲ್ಲೆ:

ಈ ವೇಳೆ ಕೋಪಗೊಂಡ ರಾಕೇಶ್‌ ಹಾಗೂ ಆತನ ಗೆಳತಿ ಬೈಸಾಕಿ ದ್ವಿಚಕ್ರ ವಾಹನ ವಾಪಾಸ್‌ ಕೊಡುವಂತೆ ಕೇಳಿದ್ದಾರೆ. ಕಂಠಪೂರ್ತಿ ಮದ್ಯ ಸೇವಿಸಿರುವುದರಿಂದ ದ್ವಿಚಕ್ರ ವಾಹನ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ರಾಕೇಶ್‌ ಹಾಗೂ ಬೈಸಾಕಿ ಸುಮಾರು ಅರ್ಧತಾಸು ಇನ್‌ಸ್ಪೆಕ್ಟರ್‌ ಅನಿತಾ ಕುಮಾರಿ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬಳಿಕ ಸಮವಸ್ತ್ರ ಹಿಡಿದು ಹಲ್ಲೆ ಸಹ ಮಾಡಿದ್ದಾರೆ. ಈ ವೇಳೆ ಅನಿತಾ ಅವರ ಬಲಗೈ, ಭುಜಕ್ಕೆ ಪೆಟ್ಟು ಬಿದ್ದಿದೆ. ಬಳಿಕ ಪೊಲೀಸರು ಆ ಇಬ್ಬರನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದು, ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಇಬ್ಬರೂ ಕಂಠಮಟ್ಟ ಮದ್ಯ ಸೇವಿಸಿರುವುದು ದೃಢಪಟ್ಟಿದೆ. ಬಳಿಕ ಇಬ್ಬರನ್ನೂ ಮಹದೇವಪುರ ಕಾನೂನ ಮತ್ತು ಸುವ್ಯವಸ್ಥೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೊರರಾಜ್ಯದ ಆರೋಪಿಗಳು:

ರಾಕೇಶ್‌ ಮತ್ತು ಬೈಸಾಕಿ ಪಶ್ಚಿಮ ಬಂಗಾಳ ಮೂಲದವರು. ರಾಕೇಶ್‌ ಮಹದೇವಪುರದ ಖಾಸಗಿ ಬ್ಯಾಂಕ್‌ ಉದ್ಯೋಗಿಯಾಗಿದ್ದಾನೆ. ಪತ್ನಿ ಮತ್ತು ಮಕ್ಕಳ ಜತೆಗೆ ಬಿ.ನಾರಾಯಣಪುರದಲ್ಲಿ ನೆಲೆಸಿದ್ದಾನೆ. ಆತನ ಸ್ನೇಹಿತೆ ಬೈಸಾಕಿ ವಿವಾಹಿತಳಾಗಿದ್ದು, ಪತಿ ಮತ್ತು ಮಕ್ಕಳ ಜತೆಗೆ ಬಿ.ನಾರಾಯಣಪುರದಲ್ಲಿ ನೆಲೆಸಿದ್ದಾರೆ. ಇಬ್ಬರು ಶನಿವಾರ ರಾತ್ರಿ ಪಾರ್ಟಿಯೊಂದರಲ್ಲಿ ಮದ್ಯ ಸೇವಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.