ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚಿಗೆ ವೀರಭದ್ರನಗರದಲ್ಲಿ ಕರ್ನಾಟಕ ರತ್ನ ತುಮಕೂರಿನ ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾಗಿದ್ದ ಡಾ। ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆ ವಿರೂಪಗೊಳಿಸಿದ್ದ ಕಿಡಿಗೇಡಿಯೊಬ್ಬನನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆಂಧ್ರ ಮೂಲದ, ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಿವಕೃಷ್ಣ ಬಂಧಿತನಾಗಿದ್ದು, ಡಿ.1 ರಂದು ಶ್ರೀಗಳ ಪ್ರತಿಮೆಯನ್ನು ಆರೋಪಿ ವಿರೂಪಗೊಳಿಸಿ ಆತ ಪರಾರಿಯಾಗಿದ್ದ. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಶಿವಕೃಷ್ಣನನ್ನು ಬಂಧಿಸಿದ್ದಾರೆ.
ಅನ್ಯಧರ್ಮದ ಪರ ಒಲವು: ಹಿಂದೂ ಧರ್ಮೀಯನಾದ ಶಿವಕೃಷ್ಣ, ಇತ್ತೀಚಿಗೆ ಅನ್ಯ ಧರ್ಮದ ಪರ ಒಲವು ಹೊಂದಿದ್ದ. ಆದರೆ ಆತ ಮತಾಂತರವಾಗಿರಲಿಲ್ಲ. ಹೀಗಾಗಿ ಧರ್ಮ ವ್ಯಾಮೋಹದ ಕಾರಣಕ್ಕೆ ಆತ ಈ ದುಷ್ಕೃತ್ಯ ಎಸಗಿರಬಹುದು ಎನ್ನಲಾಗಿದೆ.ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಆಂಧ್ರಪ್ರದೇಶ ರಾಜ್ಯದ ಶಿವಕೃಷ್ಣ ಕುಟುಂಬ ವಲಸೆ ಬಂದಿದ್ದು, ಭಾರತ್ ನಗರದಲ್ಲಿ ಆತನ ಪೋಷಕರು ನೆಲೆಸಿದ್ದಾರೆ. ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡು ಶಿವಕೃಷ್ಣ ಜೀವನ ಸಾಗಿಸುತ್ತಿದ್ದ. ವೀರಭದ್ರ ನಗರದಲ್ಲಿ ಡಿ.1 ರಂದು ನಸುಕಿನಲ್ಲಿ ಶ್ರೀಗಳ ಪ್ರತಿಮೆಗೆ ವಿರೂಪಗೊಳಿಸಿ ಆತ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವೀರಶೈವ ಸಭಾ ಧರಣಿಬೆಂಗಳೂರು: ದೀಪಾಂಜಲಿನಗರ ವಾರ್ಡ್‌ನ ವೀರಭದ್ರನಗರ ಬಸ್ ನಿಲ್ದಾಣದ ಬಳಿಯಿರುವ ಸಿದ್ಧಗಂಗಾ ಶಿವಕುಮಾರ ಶ್ರೀಗಳ ಪುತ್ಥಳಿ ಭಗ್ನಗೊಳಿಸಿದ್ದನ್ನು ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಬಿಬಿಎಂಪಿ ಘಟಕದ ಕಾರ್ಯಕರ್ತರು ನಡೆಸಿದರು.ಗುರುವಾರ ಬೆಳಗ್ಗೆ ಪುತ್ಥಳಿ ಬಳಿ ಸೇರಿದ ಮಹಾಸಭಾದ ನೂರಾರು ಕಾರ್ಯಕರ್ತರು ಘಟನೆ ಖಂಡಿಸಿ ಘೋಷಣೆ ಕೂಗಿದರು. ಪುತ್ಥಳಿ ಹಾನಿಪಡಿಸಿದ ಕಿಡಿಗೇಡಿಯನ್ನು ಬಂಧಿಸಿರುವುದು ಸ್ವಾಗತಿಸುತ್ತೇವೆ. ಆದರೆ, ಆತ ಕಾನೂನಿನಿಂದ ತಪ್ಪಿಸಿಕೊಳ್ಳದಂತೆ ಕ್ರಮ ವಹಿಸಬೇಕು. ಹಾಗೂ ಇದೇ ಜಾಗದಲ್ಲಿ ಪುನಃ ದೊಡ್ಡದಾದ ಮೂರ್ತಿಯನ್ನು ಪ್ರತಿಷ್ಠಾಪಿಸಲು ಬಿಬಿಎಂಪಿ ತಕ್ಷಣ ಅನುಮತಿ ನೀಡಿ ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪೂಜ್ಯರ ಅಗೌರವ ಶಿಕ್ಷಾರ್ಹ: ಮಚಾಡೋಬೆಂಗಳೂರು: ಗಿರಿನಗರದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪ್ರತಿಮೆ ವಿರೂಪಗೊಳಿಸಿರುವುದು ಖಂಡನೀಯ. ಈ ಕೃತ್ಯವೆಸಗಿದ ವ್ಯಕ್ತಿಯ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಂಡು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆರ್ಚ್ ಬಿಷಪ್ ಡಾ. ಪೀಟರ್ ಮಚಾಡೊ ಆಗ್ರಹಿಸಿದ್ದಾರೆ.
ಗುರುವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾಡೊ ಅವರು, ಶಾಂತಿ, ಕರುಣೆ ಮತ್ತು ಜಾತ್ಯತೀತ ಮೌಲ್ಯಗಳ ಸಂಕೇತವಾಗಿ ಪೂಜಿಸಲ್ಪಟ್ಟ ಶಿವಕುಮಾರ ಸ್ವಾಮೀಜಿ ಅಸಂಖ್ಯಾತ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಜೀವನದ ಪರಂಪರೆ ಸಾಮರಸ್ಯವನ್ನು ಉತ್ತೇಜಿಸುತ್ತದೆ. ಅಂತಹ ಪೂಜ್ಯರನ್ನು ಅಗೌರವಿಸುವುದು ಶಿಕ್ಷಾರ್ಹ ಎಂದಿದ್ದಾರೆ.ಸಿದ್ಧಲಿಂಗಶ್ರೀ ಖಂಡನೆ
ತುಮಕೂರು: ಡಾ। ಶಿವಕುಮಾರ ಸ್ವಾಮೀಜಿ ಪುತ್ಥಳಿಯನ್ನು ವಿಕೃತ ಮನಸ್ಸಿನ ವ್ಯಕ್ತಿ ವಿರೂಪಗೊಳಿಸಿದ್ದು, ಇದು ಅವರ ಮನಸ್ಥಿತಿ ತೋರಿಸುತ್ತದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಖಂಡಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಗಳು 111 ವರ್ಷ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇಂತಹ ಮಹನೀಯರ ಪುತ್ಥಳಿ ವಿರೂಪಗೊಳಿಸಿರುವುದು ಖಂಡನೀಯ ಎಂದರು.