ಸಾರಾಂಶ
ಬೆಂಗಳೂರು : ಕಿಟಕಿಯ ಕಬ್ಬಿಣದ ಗ್ರಿಲ್ ಕತ್ತರಿಸಿ ಮನೆ ಪ್ರವೇಶಿಸಿ ಚಿನ್ನ-ಬೆಳ್ಳಿ ಆಭರಣ ಕಳವು ಮಾಡಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜ್ಞಾನಭಾರತಿಯ ಮಾರುತಿನಗರ ನಿವಾಸಿ ಹಮೀದ್ ಖಾನ್ ಅಲಿಯಾಸ್ ಚೋರ್ ಹಮೀದ್ (57) ಮತ್ತು ಕಗ್ಗಲಿಪುರ ಮುಖ್ಯರಸ್ತೆಯ ಗುಡಿಮಾವು ನಿವಾಸಿ ಖಲೀಲ್ ಉಲ್ಲಾ ಶರೀಫ್ ಅಲಿಯಾಸ್ ಚೋಟು(34) ಬಂಧಿತರು. ಆರೋಪಿಗಳಿಂದ ₹15 ಲಕ್ಷ ಮೌಲ್ಯದ 208 ಗ್ರಾಂ ಚಿನ್ನಾಭರಣ, ಒಂದು ಕೆ.ಜಿ.ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.
ಕಳೆದ ತಿಂಗಳು ಬನಶಂಕರಿ 6ನೇ ಹಂತದ 2ನೇ ಬ್ಲಾಕ್‌ನ ಮನೆಯೊಂದರಲ್ಲಿ ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ನೂರಕ್ಕೂ ಅಧಿಕ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಈ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೃತ್ತಿಪರ ಕಳ್ಳರಾಗಿರುವ ಆರೋಪಿಗಳು ನಗರದ ವಿವಿಧೆಡೆ ದ್ವಿಚಕ್ರ ವಾಹನದಲ್ಲಿ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು. ಕದ್ದ ಮಾಲುಗಳನ್ನು ಪರಿಚಿತರ ಮುಖಾಂತರ ವಿಲೇವಾರಿ ಮಾಡಿಸಿ ಹಣ ಪಡೆದು ಮೋಜು-ಮಸ್ತಿ ಮಾಡುತ್ತಾರೆ. ಈ ಹಿಂದೆ ಸಹ ಹಲವು ಬಾರಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದರು. ನೆರೆಯ ಆಂಧ್ರಪ್ರದೇಶದ ಮತ್ತು ಕೇರಳ ರಾಜ್ಯಗಳಲ್ಲಿಯೂ ಮನೆಗಳ್ಳತನ ಮಾಡಿ ಬಂಧನಕ್ಕೆ ಒಳಗಾಗಿದ್ದರು. ಜಾಮೀನು ಪಡೆದು ಹೊರಗೆ ಬಂದ ಬಳಿಕವೂ ತಮ್ಮ ಮನೆಗಳವು ಚಾಳಿ ಮುಂದುವರೆಸಿದ್ದರು.
ಆರೋಪಿಗಳ ಬಂಧನದಿಂದ ತಲಘಟ್ಟಪುರ ಮತ್ತು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ತಲಾ ಒಂದು ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
;Resize=(690,390))
)
)
;Resize=(128,128))
;Resize=(128,128))