ಶ್ರೀರಂಗಪಟ್ಟಣ:
ತಾಲೂಕಿನ ಪಾಲಹಳ್ಳಿಗೆ ಹೋಗುವ ರಸ್ತೆ ಬಳಿ ವ್ಯಕ್ತಿಯನ್ನು ಹತ್ಯೆಗೈದಿದ್ದ ಆರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೈಸೂರು ಮಂಡಿ ಮೊಹಲ್ಲಾದ ಲೇ.ಅಬ್ದುಲ್ಲಾ ಪುತ್ರ ಮಹಮ್ಮದ್ ಅಪ್ಸರ್ ಅಲಿಯಾಸ್ ಫ್ರೂಟ್ ಅಪ್ಸರ್ (38), ರಾಜೀವ್ ನಗರ 2ನೇ ಹಂತದ ಲಾರಿ ಡ್ರೈವರ್ ಲೇ.ನಾಸೀರ್ ಖಾನ್ ಪುತ್ರ ಮಹಮ್ಮದ್ ಅಹ್ಮದ್ ಖಾನ್ ಎಂ.ಎ. ಅಲಿಯಾಸ್ ಸುಹೈಲ್ ಖಾನ್ (38) , ರಾಜೀವ್ ನಗರದ ಲೇ.ಪ್ಯಾರೆಜಾನ್ ಪುತ್ರ ಮಾಜಹಿದ್ ಪಾಷ (37), ರಾಜೀವ್ ನಗರದ 3ನೇ ಹಂತ ಲೇ.ಸೈಯದ್ ಅಕ್ರಂ ಪುತ್ರ ಸೈಯದ್ ಮುದಾಸೀರ್ (27), ಕಲ್ಯಾಣಗಿರಿಯ ಲೇ.ಮುಹದ್ದೀನ್ ಷರೀಫ್ ಪುತ್ರ ಯಾಸೀನ್ ಷರೀಫ್ (31), ಶಾಂತಿನಗರದ ಲೇ.ನಜೀರ್ ಅಹಮ್ಮದ್ ಪುತ್ರ ಮಹಮ್ಮದ್ ಅಜರ್ (32) ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಮೇ 6 ರಂದು ಗ್ರಾಮದ ಹಳ್ಳಿಮನೆ ಹೋಟೆಲ್‌ನ ಬ್ರಹ್ಮಪುರ ಸರ್ವೇ ನಂ.187/1-2ರ ಜಮೀನಿನಲ್ಲಿ ಬೆಂಗಳೂರಿನ ರೌಡಿ ಮಹಮ್ಮದ್ ಜಾವಾದ್ ಅಲಿಯಾಸ್ ಸಾಯಿಲ್ ಅವರನ್ನು ಆರೋಪಿಗಳು ಆಯುಧಗಳಿಂದ ಚುಚ್ಚಿ ಕೊಲೆಗೈದಿದ್ದರು.ಈ ಸಂಬಂಧ ಮೃತ ಸಂಬಂಧಿ ಮೈಸೂರಿನ ಮುಜಾಮಿಲ್ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಂತರ ಆರೋಪಿಗಳ ಪತ್ತೆಗಾಗಿ ತಂಡ ರಚಿಸಿ ತನಿಖೆ ಕೈಗೊಂಡಿದ್ದರು.
ಮೇ 11ರಂದು ರಾತ್ರಿ 10.30 ಸಮಯದಲ್ಲಿ ತಾಲೂಕಿನ ನಗುವಿನಹಳ್ಳಿ ಅಂಡರ್ ಪಾಸ್ ಬಳಿ, ಅದೇ ದಿನ ಸಂಜೆ ಮಂಡ್ಯದಲ್ಲಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಬೈಕ್ ಗಳು, ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ. ಹಳೇ ವೈಷಮ್ಯ ಹಣಕಾಸಿನ ವಿಚಾರವಾಗಿ ಕಿರುಕುಳದ ಹಿನ್ನೆಲೆಯಲ್ಲಿ ಜಾವಾದ್ ನನ್ನು ಆರೋಪಿಗಳು ಕೊಲೆಗೈದಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.