ರಾತ್ರಿ ವೇಳೆ ನಗರದ ವಿವಿಧೆಡೆ ಮನೆಗಳ ಬೀಗ ಮುರಿದು ಚಿನ್ನ ಕದ್ದು ಸ್ನೇಹಿತಗೆ ನೀಡುತ್ತಿದ್ದ ಆರೋಪಿಯ ಬಂಧನ

| Published : Sep 28 2024, 01:19 AM IST / Updated: Sep 28 2024, 04:47 AM IST

man-arrested-for-removing-condom-secretly-while-having-sex

ಸಾರಾಂಶ

ರಾತ್ರಿ ವೇಳೆ ನಗರದ ವಿವಿಧೆಡೆ ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದವ ಹಾಗೂ ಕಳವು ಮಾಲು ಸ್ವೀಕರಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ರಾತ್ರಿ ವೇಳೆ ನಗರದ ವಿವಿಧೆಡೆ ಮನೆಗಳ ಬೀಗ ಮುರಿದು ಕಳವು ಮಾಡುತ್ತಿದ್ದವ ಹಾಗೂ ಕಳವು ಮಾಲು ಸ್ವೀಕರಿಸುತ್ತಿದ್ದ ಆರೋಪಿ ಸೇರಿ ಇಬ್ಬರನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರ ನಿವಾಸಿ ಶ್ರೀನಿವಾಸ ಅಲಿಯಾಸ್‌ ಕರಾಟೆ ಸೀನ(35) ಮತ್ತು ದೇವನಹಳ್ಳಿ ನಿವಾಸಿ ಮಂಜುನಾಥ(47) ಬಂಧಿತರು. ಆರೋಪಿಗಳಿಂದ ₹14 ಲಕ್ಷ ಮೌಲ್ಯದ 245 ಗ್ರಾಂ ತೂಕದ ಚಿನ್ನಾಭರಣ, ದ್ವಿಚಕ್ರ ವಾಹನ ಹಾಗೂ ಕಬ್ಬಿಣದ ರಾಡ್‌ ಜಪ್ತಿ ಮಾಡಲಾಗಿದೆ. ಮೇ 7ರಂದು ಮುಂಜಾನೆ ದುಷ್ಕರ್ಮಿಗಳು ಪೀಣ್ಯಾ 2ನೇ ಹಂತದ ಫ್ಯಾಕ್ಟರಿಯೊಂದರ ಮಹಡಿ ಶೀಟ್‌ ಕತ್ತರಿಸಿ ಒಳ ಪ್ರವೇಶಿಸಿ ₹55 ಸಾವಿರ ನಗದು, ಲ್ಯಾಪ್‌ ಟಾಪ್‌, ಬಿಲ್ಲಿಂಗ್ ಸಿಗ್ನೇಚರ್‌ ಸೀಲ್‌ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಫ್ಯಾಕ್ಟರಿ ಮಾಲೀಕರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ತನಿಖೆ ವೇಳೆ ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ವೇಳೆ ಸಿಕ್ಕ ಸುಳಿವು ಹಾಗೂ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಪೀಣ್ಯಾ 2ನೇ ಹಂತದ ಬಸ್‌ ನಿಲ್ದಾಣದ ಬಳಿ ಆರೋಪಿ ಶ್ರೀನಿವಾಸನನ್ನು ಬಂಧಿಸಲಾಗಿದೆ. ದ್ವಿಚಕ್ರ ವಾಹನ, ಎರಡು ಚಿನ್ನದ ಸರ, ಬ್ರಾಸ್‌ಲೆಟ್‌ ಸಹಿತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಹೆಚ್ಚಿನ ವಿಚಾರಣೆ ವೇಳೆ ಆರೋಪಿಯು ನಗರದ ವಿವಿಧೆಡೆ ಮನೆಗಳವು ಮಾಡಿರುವ ವಿಚಾರ ಬಾಯ್ಬಿಟ್ಟಿದ್ದಾನೆ. ಕದ್ದ ಚಿನ್ನಾಭರಣಗಳನ್ನು ಸ್ನೇಹಿತರಿಗೆ ನೀಡಿದ್ದಾಗಿ ಮಾಹಿತಿ ನೀಡಿದ್ದಾನೆ. ಇದರ ಆಧಾರದ ಮೇಲೆ ದೇವನಹಳ್ಳಿ ಬಸ್‌ ನಿಲ್ದಾಣದ ಬಳಿ ಆರೋಪಿ ಶ್ರೀನಿವಾಸನ ಸ್ನೇಹಿತ ಮಂಜುನಾಥನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳವು ಮಾಲು ಸ್ವೀಕರಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಬಳಿಕ ಆರೋಪಿಯು ದೊಡ್ಡಬಳ್ಳಾಪುರ ತಾಲೂಕಿನ ಮೇಳಕೋಟೆ ಜುವೆಲ್ಲರಿ ಅಂಗಡಿ ಹಾಗೂ ದೇವನಹಳ್ಳಿ ಬ್ಯಾಂಕ್‌ವೊಂದರಲ್ಲಿ ಅಡಮಾನವಿರಿಸಿದ್ದ 100 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಅಂತೆಯೇ ಆರೋಪಿ ಶ್ರೀನಿವಾಸನ ಮತ್ತೊಬ್ಬ ಸ್ನೇಹಿತನಿಂದ 105 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

30 ಮನೆಗಳವು ಕೇಸ್‌

ಆರೋಪಿ ಶ್ರೀನಿವಾಸ ವೃತ್ತಿಪರ ಕಳ್ಳನಾಗಿದ್ದು, ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಈ ಹಿಂದೆ 30ಕ್ಕೂ ಅಧಿಕ ಮನೆಗಳವು ಪ್ರಕರಣಗಳು ದಾಖಲಾಗಿವೆ. ಸದ್ಯ ಆರೋಪಿಯ ಬಂಧನದಿಂದ ರಾಜಗೋಪಾಲನಗರ ಮೂರು ಕಳವು ಪ್ರಕರಣ, ಬಾಗಲಗುಂಟೆ, ವಿದ್ಯಾರಣ್ಯಪುರ, ಅವಲಹಳ್ಳಿ ತಲಾ ಮೂರು ಮನೆಗಳವು ಸೇರಿದಂತೆ ಒಟ್ಟು ಆರು ಕಳವು ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.