ಕನ್ನಡಪ್ರಭ ವಾರ್ತೆ ಮಂಡ್ಯ

ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಮಳವಳ್ಳಿ ತಾಲೂಕು ಕಿರುಗಾವಲು ಠಾಣೆ ಪೊಲೀಸರು ೪೭೫.೫ ಗ್ರಾಂ ತೂಕದ ೭೦ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ. ಶೋಭರಾಣಿ ತಿಳಿಸಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಳವಳ್ಳಿ ತಾಲೂಕು ತಳಗವಾದಿ ಗ್ರಾಮದ ಟಿ.ಪಿ.ರೋಹಿತ್ ಅಲಿಯಾಸ್ ಗೆದ್ವಾ (೨೦), ಟಿ.ಎನ್.ನಂಜೇಗೌಡ ಅಲಿಯಾಸ್ ಕಾಶಿ (೧೯), ಟಿ.ಎಚ್.ಗುರುಪ್ರಸಾದ್ ಅಲಿಯಾಸ್ ಗುರು (೩೬) ಹಾಗೂ ಎಸ್.ಮಾದೇಶ ಅಲಿಯಾಸ್ ಮಾದ (೨೦) ಎಂಬುವರೇ ಬಂಧಿತ ಆರೋಪಿಗಳು ಎಂದು ತಿಳಿಸಿದರು.

ಮಳವಳ್ಳಿ ತಾಲೂಕು ಅಣಸಾಲೆ ಗ್ರಾಮದ ಪುಟ್ಟಮ್ಮ ಅವರು ತಮ್ಮ ಮನೆಯ ಇ-ಸ್ವತ್ತು ಮಾಡಿಸುವ ಸಲುವಾಗಿ ಕಳೆದ ಮಾ.೩೦ರಂದು ಚಿಕ್ಕಮುಲಗೂಡು ಗ್ರಾಮ ಪಂಚಾಯ್ತಿಗೆ ಹೋಗಿ ತಮ್ಮ ಊರಿಗೆ ವಾಪಸ್ಸು ತೆರಳುತ್ತಿದ್ದಾಗ ಚಿಕ್ಕಮುಲಗೂಡು- ರಾಮನಾಥ ಮೋಳೆ ರಸ್ತೆಯಲ್ಲಿ ಮಧ್ಯಾಹ್ನ ೧೨.೩೦ ಗಂಟೆ ಸಮಯದಲ್ಲಿ ಅಪರಿಚಿತರಿಬ್ಬರು ಬೈಕ್‌ನಲ್ಲಿ ಬಂದು ಪುಟ್ಟಮ್ಮ ಅವರ ಕತ್ತಿನಲ್ಲಿದ್ದ ಚಿನ್ನದ ತಾಳಿ ಮತ್ತು ಎರಡು ಗುಂಡುಗಳು ಸೇರಿ ಸುಮಾರು ೨೭ ಗ್ರಾಂ ತೂಕದ ಚಿನ್ನದ ಚೈನನ್ನು ಕಿತ್ತು ಪರಾರಿಯಾಗಿದ್ದರು ಎಂದರು.

ಚೈನು ಕಳೆದುಕೊಂಡ ಪುಟ್ಟಮ್ಮ ಅವರು ಕಿರುಗಾವಲು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಾಗ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರೋಹಿತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಸತ್ಯಾಂಶ ಬೆಳಕಿಗೆ ಬಂತು ಎಂದರು.


ಸ್ಕೆಚ್ ಹಾಕುತ್ತಿದ್ದ ಗುರುಪ್ರಸಾದ್:

ಆರೋಪಿ ಗುರುಪ್ರಸಾದ್ ಮದುವೆಯಾಗಿದ್ದ. ತನ್ನ ಪತ್ನಿಗೆ ತಾನು ಸಿರಿವಂತ ಎಂದು ತೋರಿಸಿಕೊಳ್ಳುವ ಸಲುವಾಗಿ ಚಿನ್ನದ ಸರ ಕಳವು ಮಾಡುತ್ತಾ ಐಷಾರಾಮಿ ಜೀವನ ನಡೆಸುತ್ತಿದ್ದನು. ಕಳೆದ ೨೦೨೪ರಲ್ಲಿ ಪತ್ನಿ ಈತನೊಂದಿಗೆ ಜಗಳ ಮಾಡಿಕೊಂಡು ತವರು ಮನೆ ಸೇರಿಸಿಕೊಂಡಿದ್ದಳು. ಅಂದಿನಿಂದ ಚೈನ್ ಕಳವು ಮಾಡುವುದನ್ನು ಗುರುಪ್ರಸಾದ್ ನಿಲ್ಲಿಸಿದ್ದನು. ಈ ಮಧ್ಯೆ ಪತ್ನಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಆತ್ಮಹತ್ಯೆಗೆ ಗುರುಪ್ರಸಾದ್ ಕಾರಣ ಎಂದು ಆತನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು ಎಂದರು.

ಜೈಲಿನಿಂದ ಹೊರಗೆ ಬಂದ ಗುರುಪ್ರಸಾದ್ ಮತ್ತೆ ತಮ್ಮೂರಿನಲ್ಲಿ ಹಣದ ಅವಶ್ಯವಿರುವ ಯುವಕರನ್ನು ಒಗ್ಗೂಡಿಸಿ ತಂಡವೊಂದನ್ನು ಕಟ್ಟಿ ಆ ಮೂಲಕ ಚಿನ್ನದ ಸರ ಕಳವು ಮಾಡಲು ಸ್ಕೆಚ್ ಹಾಕಿದ್ದ. ಅದಕ್ಕಾಗಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಚೈನ್ ಕಳವು ಯೋಜನೆಯನ್ನು ಗುರುಪ್ರಸಾದ್ ರೂಪಿಸುತ್ತಿದ್ದ. ಅದನ್ನು ರೋಹಿತ್, ನಂಜೇಗೌಡ, ಮಾದೇಶ ಎರಡು ತಂಡಗಳಾಗಿ ವಿಭಜನೆಗೊಂಡು ಕಳವು ಮಾಡುತ್ತಿದ್ದರು. ಹೀಗೆ ಕದ್ದ ಚಿನ್ನಾಭರಣಗಳನ್ನು ಕೋಶಮಟ್ಟಂ ಎಂಬ ಚಿನ್ನಾಭರಣ ಗಿರವಿ ಸಂಸ್ಥೆಯಲ್ಲಿ ಮೊದಲು ಆರೋಪಿ ಗುರುಪ್ರಸಾದ್ ತಮ್ಮ, ತಾಯಿ, ಚಿಕ್ಕಮ್ಮ ಇತರೆ ಸಂಬಂಧಿಕರ ಒಡವೆಗಳು ಎಂದೇಳಿಕೊಂಡು ಗಿರವಿ ಇಡುತ್ತಿದ್ದ. ನಂತರ ಅದನ್ನು ಮಾರಾಟ ಮಾಡಿ ಉಳಿದ ಹಣವನ್ನೂ ಪಡೆದು ಎಲ್ಲರೂ ಹಂಚಿಕೊಳ್ಳುತ್ತಿದ್ದರು ಎಂದು ವಿವರಿಸಿದರು.

ಆರೋಪಿಗಳು ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೨೦೨೨ರಲ್ಲಿ ೨ ಪ್ರಕರಣ, ೨೩ರಲ್ಲಿ ೮ ಪ್ರಕರಣ, ೨೪ರಲ್ಲಿ ೨, ೨೬ರಲ್ಲಿ ೪ ಪ್ರಕರಣ ಸೇರಿ ೧೬ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ರೋಹಿತ್ ಮತ್ತು ನಂಜೇಗೌಡ ತಂಡ ೪, ಗುರುಪ್ರಸಾದ್-ಮಾದೇಶ ತಂಡ ೮ ಹಾಗೂ ರೋಹಿತ್ ಮತ್ತು ಮಾದೇಶ ತಂಡ ೪ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.

ಆರೋಪಿಗಳಿಂದ ಒಟ್ಟು ೪೭೫.೫ ಗ್ರಾಂ ತೂಕದ ಚಿನ್ನದ ಒಡವೆಯನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ೭೦,೩೭,೪೦೦ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಪರ ಪೊಲೀಸ್ ಅಧೀಕ್ಷಕ ಎಸ್.ಇ. ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ಯಶ್ವಂತ್‌ಕುಮಾರ್ ಇತರರು ಗೋಷ್ಠಿಯಲ್ಲಿದ್ದರು.