ಸಾರಾಂಶ
ಅಂಗಡಿ ಶಟರ್ ಮೀಟಿ ಹಣ ದೋಚುತ್ತಿದ್ದ ಕಳ್ಳರ ಬಂಧನ; ಹಣ, ಬೈಕ್, ಮೊಬೈಲ್ ಜಪ್ತಿ
ಕನ್ನಡಪ್ರಭ ವಾರ್ತೆ ಬೆಂಗಳೂರು
ಇರುಳಿನಲ್ಲಿ ಅಂಗಡಿಗಳ ಶಟರ್ ಮೀಟಿ ಹಣ ದೋಚುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಜೆ.ಬಿ.ನಗರ ನಿವಾಸಿಗಳಾದ ಆದಿತ್ಯ ಹಾಗೂ ವರುಣ್ ಬಂಧಿತರಾಗಿದ್ದು, ಆರೋಪಿಗಳಿಂದ ₹1.1 ಲಕ್ಷ ನಗದು, ಬೈಕ್ ಹಾಗೂ ಎರಡು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ವೇಳೆ ತಪ್ಪಿಸಿಕೊಂಡಿರುವ ಆರೋಪಿ ರೋಹಿತ್ ಪತ್ತೆಗೆ ತನಿಖೆ ನಡೆದಿದೆ.
ಇತ್ತೀಚೆಗೆ ಸಂಪಿಗೆ ರಸ್ತೆಯ ೧೫ನೇ ಕ್ರಾಸ್‌ನಲ್ಲಿರುವ ಅಂಗಡಿಗೆ ದುಷ್ಕರ್ಮಿಗಳು ನುಗ್ಗಿ ಹಣ ದೋಚಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಟೆಕ್ಟರ್ ಜಗದೀಶ್ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಕಳ್ಳರನ್ನು ಸೆರೆ ಹಿಡಿದಿದೆ.ವರುಣ್ ಹಾಗೂ ಆದಿತ್ಯ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಈ ಇಬ್ಬರ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಲವು ಬಾರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆರೋಪಿಗಳು ಜೈಲೂಟ ಸಹ ಸವಿದಿದ್ದರು. ಹೀಗಿದ್ದರೂ ಅವರು ಬದಲಾಗದೆ ತಮ್ಮ ಚಾಳಿ ಮುಂದುವರೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ರಾತ್ರಿ ವೇಳೆಯಲ್ಲಿ ಅಂಗಡಿಗಳ ರೋಲಿಂಗ್ ಶಟರನ್ನು ಕಬ್ಬಿಣದ ರಾಡಿನಿಂದ ಒಡೆದು ನಗದು ಹಣವನ್ನು ಕಳವು ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಆರೋಪಿಗಳಿಂದ ಮಲ್ಲೇಶ್ವರ, ರಾಜಾಜಿನಗರ, ಪೀಣ್ಯ, ಸುಬ್ರಹ್ಮಣ್ಯನಗರ, ಇಂದಿರಾನಗರ, ತಲಘಟ್ಟಪುರ, ಜಯನಗರ ಹಾಗೂ ಯಲಹಂಕ ಉಪನಗರ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 12 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.--
ಫೋಟೋ ಇವೆ.