ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮನೆಗಳ್ಳತನ ಮಾಡಲು ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವೃತ್ತಿಪರ ಖದೀಮರ ತಂಡವೊಂದು ಮಡಿವಾಳ ಠಾಣೆ ಪೊಲೀಸರ ಬಲೆಗೆ ಬಿದ್ದಿದೆ.ತೆಲಂಗಾಣ ರಾಜ್ಯದ ಹೈದರಾಬಾದ್ ನಗರದ ಅಬ್ದುಲ್ ಅಲಿ, ಶೇಕ್ ಫಯಾಜ್ ಹಾಗೂ ಆಯೇಜ್ ಅಹ್ಮದ್ ಬಂಧಿತರಾಗಿದ್ದು, ಆರೋಪಿಗಳಿಂದ 50 ಗ್ರಾಂ ಚಿನ್ನಾಭರಣ, 157 ಗ್ರಾಂ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಡಿವಾಳ ವ್ಯಾಪ್ತಿಯಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಗಳ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೂರಾರು ಕೇಸ್ ಬಿದ್ದರೂ ಬಿಟ್ಟಿಲ್ಲ ಕಳ್ಳತನ:ಈ ಆರೋಪಿಗಳು ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಹಲವು ವರ್ಷಗಳಿಂದ ಅಪರಾಧ ಜಗತ್ತಿನಲ್ಲಿ ಮೂವರು ನಿರತರಾಗಿದ್ದಾರೆ. ಎಂಬಿಎ ಪದವೀಧರ ಅಹ್ಮದ್ ವಿರುದ್ಧ ಹೈದರಾಬಾದ್ ನಗರದಲ್ಲಿ ೧೦೧ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇನ್ನುಳಿದ ಅಲಿ ಮೇಲೆ 50ಕ್ಕೂ ಅಧಿಕ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ಕಾರಿನಲ್ಲಿ ಬರುತ್ತಿದ್ದ ಆರೋಪಿಗಳು, ಬಳಿಕ ಜನವಸತಿ ಪ್ರದೇಶದ ಸಮೀಪ ಕಾರು ನಿಲುಗಡೆ ಮಾಡುತ್ತಿದ್ದರು. ನಂತರ ಆ ಪ್ರದೇಶದಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಹಗಲು ಹೊತ್ತಿನಲ್ಲೇ ಕನ್ನ ಹಾಕಿ ಕೈಗೆ ಸಿಕ್ಕಿದ್ದನ್ನು ದೋಚಿ ಪರಾರಿಯಾಗುತ್ತಿದ್ದರು. ಅದೇ ರೀತಿ ಕೆಲ ದಿನಗಳ ಹಿಂದೆ ಮಡಿವಾಳದ ಮಾರುತಿನಗರ 7ನೇ ಕ್ರಾಸ್‌ನಲ್ಲಿ ಮನೆಯೊಂದರ ಬೀಗ ಮುರಿದು ಕಳ್ಳರು ಚಿನ್ನಾಭರಣ ದೋಚಿದ್ದರು. ಹೀಗೆ ಸಂಪಾದಿಸಿದ ಹಣದಲ್ಲಿ ಗೋವಾಕ್ಕೆ ತೆರಳಿ ಆರೋಪಿಗಳು ಮೋಜು ಮಸ್ತಿ ಮಾಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.