ಸಾರಾಂಶ
ಬೆಂಗಳೂರು : ಇತ್ತೀಚೆಗೆ ಹಾಲು ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದ ಇಬ್ಬರು ಹೊರರಾಜ್ಯದ ಆರೋಪಿಗಳನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಮೂಲದ ದೇಬಸಿಸ್ ದಾಸ್(35) ಮತ್ತು ಮಧುಸೂದನ್ ಪಣಿಗಿರೈ(20) ಬಂಧಿತರು. ಆರೋಪಿಗಳಿಂದ ಸುಮಾರು ₹5 ಲಕ್ಷ ಮೌಲ್ಯದ 60 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ಬೈಕ್ ಜಪ್ತಿ ಮಾಡಲಾಗಿದೆ.
ಮಹದೇಪುರ ಹೂಡಿ ನಿವಾಸಿ ನಿರ್ಮಲಾ ಎಂಬುವವರು ನ.21ರಂದು ಬೆಳಗ್ಗೆ ಸುಮಾರು 7 ಗಂಟೆಗೆ ಹೂಡಿ ಮುಖ್ಯರಸ್ತೆಯ ಅಂಗಡಿಗೆ ತೆರಳಿ ಹಾಲು ತೆಗೆದುಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ನಿರ್ಮಲಾ ಅವರ ಮನೆ ಎದುರಿನ ರಸ್ತೆಯಲ್ಲಿ ನಿಂತಿದ್ದಾರೆ. ಆಗ ನಿರ್ಮಲಾ ಗೇಟ್ ತೆರೆದು ಮನೆಗೆ ಒಳಗೆ ಹೋಗುವಾಗ ಏಕಾಏಕಿ ಬೈಕ್‌ನಲ್ಲಿ ಪಕ್ಕಕ್ಕೆ ಬಂದು ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪಿಎಸ್‌ಐ ಪರಶುರಾಮ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣದ ದಾಖಲಾದ 24 ತಾಸಿನೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪ್ರಕರಣದ ತನಿಖೆ ವೇಳೆ ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವು ಹಾಗೂ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಕೊಡಿಗೇಹಳ್ಳಿ ಬಾಲಾಜಿ ಲೇಔಟ್‌ನ ಮನೆಯೊಂದರಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಸರಗಳವು ಮಾಡಿದ್ದು ತಾವೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಬಳಿಕ ಆರೋಪಿಗಳಿಂದ 60 ಗ್ರಾಂ ಮಾಂಗಲ್ಯ ಸರ, ಬೈಕ್ ಜಪ್ತಿ ಮಾಡಿದ್ದಾರೆ.
ಒಡಿಶಾದಲ್ಲಿ ಹಲವು ಪ್ರಕರಣ ದಾಖಲು: ಆರೋಪಿ ದೇಬಸಿಸ್ ದಾಸ್ ಅಪರಾಧ ಹಿನ್ನೆಲೆ ಹೊಂದಿದ್ದಾನೆ. ಈತನ ವಿರುದ್ಧ ಒಡಿಶಾದ ಕೈರಾ, ಭದ್ರಾಕ್ ನಗರ, ಸಿಮುಲಿಯಾ, ಸೌರಾ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ 12 ಅಪರಾಧ ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಮಧುಸೂದನ್ ಪಣಿಗಿರೈ ವಿರುದ್ಧ ಈ ಹಿಂದೆ ಅಪರಾಧ ಪ್ರಕರಣ ದಾಖಲಾಗಿರುವ ಬಗ್ಗೆ ಮಾಹಿತಿ ಇಲ್ಲ.
ಹೋಟೆಲ್ ಬಿಜಿನೆಸ್‌ನಲ್ಲಿ ನಷ್ಟ: ಆರೋಪಿಗಳು 2 ತಿಂಗಳ ಹಿಂದೆಯಷ್ಟೇ ಒಡಿಶಾದಿಂದ ಬೆಂಗಳೂರು ನಗರಕ್ಕೆ ಬಂದಿದ್ದು, ಕೊಡಿಗೇಹಳ್ಳಿಯ ಬಾಲಾಜಿ ಲೇಔಟ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮುನಿಕೊಳಲಿನಲ್ಲಿ ಹೋಟೆಲ್‌ವೊಂದನ್ನು ಆರಂಭಿಸಿದ್ದ ಆರೋಪಿಗಳು, ನಷ್ಟ ಉಂಟಾದ ಹಿನ್ನೆಲೆ ಹೋಟೆಲ್ ಬಾಗಿಲು ಮುಚ್ಚಿದ್ದರು. ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಿದ್ದರು. ಅದರಂತೆ ಮಹಿಳೆಯ ಸರಗಳವು ಮಾಡಿದ್ದರು.