ರೂಂ ಬಾಗಿಲು ಹಾಕದ ವಿದ್ಯಾರ್ಥಿಗಳ ಲ್ಯಾಪ್‌ಟಾಪ್‌ ಕದಿಯುತ್ತಿದ್ದವ ಬಂಧನ

| Published : May 22 2024, 01:15 AM IST

ರೂಂ ಬಾಗಿಲು ಹಾಕದ ವಿದ್ಯಾರ್ಥಿಗಳ ಲ್ಯಾಪ್‌ಟಾಪ್‌ ಕದಿಯುತ್ತಿದ್ದವ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಪಿಜಿ ಹಾಗೂ ಹಾಸ್ಟೆಲ್‌ಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಪಿಜಿ ಹಾಗೂ ಹಾಸ್ಟೆಲ್‌ಗಳನ್ನು ಗುರಿಯಾಗಿಸಿಕೊಂಡು ಲ್ಯಾಪ್‌ ಟಾಪ್ ಕಳವು ಮಾಡುತ್ತಿದ್ದ ಅಂತಾರಾಜ್ಯ ಖದೀಮನೊಬ್ಬ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ವಿ.ಕುಮಾರ್ ಬಂಧಿತನಾಗಿದ್ದು, ಆರೋಪಿಯಿಂದ ₹16 ಲಕ್ಷ ಮೌಲ್ಯದ 25 ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಕೆ.ಎಸ್‌.ಲೇಔಟ್‌ನ ದಯಾನಂದ್ ಸಾಗರ್ ಕಾಲೇಜಿನ ವಿದ್ಯಾರ್ಥಿಗಳ ₹2.26 ಲಕ್ಷ ಮೌಲ್ಯದ ಲ್ಯಾಪ್‌ಟಾಪ್‌ಗಳು ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಇಂದಿರಾನಗರದ ಮೆಟ್ರೋ ಪಿಲ್ಲರ್ ಬಳಿ ತಂಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಅಲೆಮಾರಿ ಜೀವನ ಆರೋಪಿ:

ಹಲವು ವರ್ಷಗಳಿಂದ ಕಳ್ಳತನ ಕೃತ್ಯದಲ್ಲಿ ಕುಮಾರ್ ತೊಡಗಿದ್ದು, ಒಂದೆಡೆ ನೆಲೆ ನಿಲ್ಲದೆ ಆತ ಅಲೆಮಾರಿ ಜೀವನ ಸಾಗಿಸುತ್ತಿದ್ದ. 2012ರಲ್ಲಿ ಮೊದಲ ಬಾರಿಗೆ ಆತನ ಬಂಧನವಾಗಿತ್ತು. ಆನಂತರ ಪೊಲೀಸರ ಕೈ ಸಿಗದೆ ತನ್ನ ಅಪರಾಧ ಕೃತ್ಯಗಳನ್ನು ಕುಮಾರ್ ಮುಂದುವರೆಸಿದ್ದ. ನಗರದಲ್ಲಿ ಪಿಜಿಗಳು ಹಾಗೂ ಹಾಸ್ಟೆಲ್‌ಗಳನ್ನು ಗುರಿಯಾಗಿಸಿಕೊಂಡು ಆತ ಲ್ಯಾಪ್‌ಟಾಪ್‌ ಕಳವು ಮಾಡುತ್ತಿದ್ದ. ಮುಂಜಾನೆ ವೇಳೆ ರೂಮ್ ಬಾಗಿಲು ಹಾಕದೆ ವಿದ್ಯಾರ್ಥಿಗಳು ನಿದ್ರೆಯಲ್ಲಿದ್ದಾಗ ನುಸುಳಿ ಆರೋಪಿ ಲ್ಯಾಪ್‌ಟಾಪ್ ಎಗರಿಸಿ ಪರಾರಿಯಾಗುತ್ತಿದ್ದ. ಇನ್ನು ಕೆಲವು ಕಡೆ ಪಿಜಿ ಹಾಗೂ ಹಾಸ್ಟೆಲ್‌ಗಳಿಗೆ ಅಡುಗೆ ಕೆಲಸಗಾರ ಅಥವಾ ಸ್ವಚ್ಛತಾ ಸಿಬ್ಬಂದಿ ಸೋಗಿನಲ್ಲಿ ತೆರಳಿ ಕಳವು ಮಾಡುತ್ತಿದ್ದ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಅಂಟೋನಿ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.